ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಸರಕಾರ ಕಟಿಬದ್ಧ: ಬಲ್ಕಿಸ್‌ಬಾನು
ಸೊರಬ, ಜೂ. 13: ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಆಡಳಿತ ಸರಕಾರ ಕಟಿಬದ್ಧವಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ರಾಜ್ಯಾಧ್ಯಕ್ಷೆ ಬಲ್ಕಿಸ್‌ಬಾನು ಹೇಳಿದ್ದಾರೆ.
ಪಟ್ಟಣದ ಕರ್ನಾಟಕ ಕಸ್ತೂರ್ಬಾ ಗಾಂಧಿ ಬಾಲಿಕ ವಸತಿ ನಿಲಯ, ಉರ್ದು ಶಾಲೆಗಳಿಗೆ ಭೇಟಿ ನೀಡಿ ನಂತರ ಅಲ್ಪಸಂಖ್ಯಾತರ ಮುಖಂಡರೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದರು.
ನಿರುದ್ಯೋಗ ಸಮಸ್ಯೆಯ ಜೊತೆಗೆ ಸುಶಿಕ್ಷಿತ ಪೀಳಿಗೆಯನ್ನು ಹೊರತರಲು ಶಿಕ್ಷಣದ ಅವಶ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೆ ಇಂತಹ ಮಕ್ಕಳನ್ನು ಶಿಕ್ಷಣದ ಕಡೆಗೆ ಸೆಳೆಯಲು ಹಲವು ಯೋಜನೆಗಳು ರೂಪುಗೊಂಡಿದೆ ಎಂದ ಅವರು, ಈಗಾಗಲೆ ಸೊರಬದಲ್ಲಿ ಅಲ್ಪಸಂಖ್ಯಾತ 6-10ನೆ ತರಗತಿ ಹೆಣ್ಣುಮಕ್ಕಳಿಗೆ ನೆರವಾಗುವಂತೆ ವಿದ್ಯಾರ್ಥಿನಿ ನಿಲಯ ಆರಂಭಿಸಿ ವರ್ಷವಾದರೂ ಪ್ರವೇಶಾತಿಯಲ್ಲಿ ತೀರಾ ಹಿಂದುಳಿದಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಭ್ರಷ್ಟ ರಹಿತ ಸರಕಾರ, ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಸಾರ್ವಜನಿಕರಿಗೆ ನೇರ ಸೌಲಭ್ಯ ಸಿಗುವಂತೆ ಏರ್ಪಾಡು ಮಾಡಿರುವುದು ಸಂತಸದ ಸಂಗತಿ ಎಂದರು. ಅಲ್ಪಸಂಖ್ಯಾತರನಿಲಯ ಹೊರತು ಪಡಿಸಿ, ಉಳಿದ ಬಿಸಿಎಂ ವಸತಿ ನಿಲಯಗಳಲ್ಲೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಶೇ.25ರಷ್ಟು ಪ್ರವೇಶಾವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಇದೇ ಸಂದಭರ್ದಲ್ಲಿ ಶೈಕ್ಷಣಿಕ ಅವಧಿ ಆರಂಭವಾ ಗುತ್ತಿದ್ದಂತೆಯೇ ಶಿಕ್ಷಕರ ಕೊರತೆ ಇರುವಲ್ಲಿ ಅತಿಥಿ ಶಿಕ್ಷಕ ರನ್ನು ನೇಮಿಸುವುದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನೆರವಾಗುತ್ತದೆ. ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಿಸಲು ಸಹಾಯ ಮಾಡುವಂತೆ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಎನ್.ನೂರ್ ಅಹ್ಮದ್ ಬಲ್ಕಿಸ್‌ಬಾನು ಗಮನಕ್ಕೆ ತಂದರು.
ಶಿಕ್ಷಣಕ್ಕೆ ಪೂರಕವಾಗಿರುವ ಭೌತಿಕ ವ್ಯವಸ್ಥೆ ತೀರಾ ಹದಗೆಟ್ಟಿರುವುದರಿಂದ ಅಂತಹ ಅಲ್ಪಸಂಖ್ಯಾತರ ಶಾಲೆಗಳ ದುರಸ್ಥಿ ಬಗ್ಗೆ, ಖಾಯಂ ಶಿಕ್ಷಕರ ನೇಮಕಾತಿ ಬಗ್ಗೆ ಸರಕಾರ ಗಮನಹರಿಸಬೇಕು ಎಂದು ಅಲ್ಪಸಂಖ್ಯಾತರ ಮುಖಂಡರು ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಬಿಇಒ ಸತ್ಯನಾರಾಯಣ್, ಪಪಂ ಸದಸ್ಯ ಸುಜಾಯತ್ ಉಲ್ಲಾ, ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಸಮಿತಿಯ ಉಪಾಧ್ಯಕ್ಷ ಯು.ಎಸ್.ಬುರ್ಹಾನ್, ಮಾಜಿ ಅಧ್ಯಕ್ಷ ಜೈನುಲ್ಲಾಬಿದಿನ್, ಸದಸ್ಯರಾದ ಎಸ್.ಎಂ. ನೂರುಲ್ಲಾ, ಸೈಯದ್ ಸಾದಿಕ್ ಬಾಷಾ, ಕಾಂಗ್ರೆಸ್ ಪ್ರಮುಖರಾದ ಸೈಯದ್ ನಝೀರ್, ಮುದಸ್ಸೀರ್ ಉಪಸ್ಥಿತರಿದ್ದರು.