×
Ad

ಮಕ್ಕಳ ಪ್ರಗತಿಗೆ ಶಿಕ್ಷಣ ಪ್ರಮುಖ ಮಾರ್ಗ: ಕೃಪಾ ಆಳ್ವ

Update: 2016-06-13 23:42 IST

ಕಾರವಾರ, ಜೂ.13: ಬಾಲ್ಯ ವಿವಾಹ, ಭ್ರೂಣಹತ್ಯೆ, ಬಾಲ ಕಾರ್ಮಿಕತೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಅನಿಷ್ಟಗಳನ್ನು ತೊಡೆದು ಹಾಕಲು ಶಿಕ್ಷಣ ಪ್ರಮುಖ ಮಾರ್ಗವಾಗಿದೆ. ರಾಜ್ಯ ಮಕ್ಕಳ ಹಕ್ಕು ಆಯೋಗದಿಂದ 10ನೆ ತರಗತಿಯವರೆಗೆ ಕಡ್ಡಾಯ ಶಿಕ್ಷಣ ನೀತಿ ರೂಪಿಸಲು ಪ್ರಯತ್ನಿಸಲಾ ಗುತ್ತಿದೆ ಎಂದು ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ ಆಳ್ವ ಹೇಳಿದ್ದಾರೆ.

ಸೋಮವಾರ ಕಾರವಾರಕ್ಕೆ ಆಗಮಿಸಿದ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಎಂಬ ಪದ್ಧತಿ ಜಾರಿಗೆ ತಂದಿದ್ದು, ವಯಸ್ಸಿನ ಮಿತಿಯನ್ನು 18ಕ್ಕೆ ಏರಿಸಲು ಪ್ರಯತ್ನಿಸುತ್ತಿದೆ ಎಂದರು.

ಪ್ರತಿಯೊಬ್ಬರು ಕಡ್ಡಾಯವಾಗಿ ಎಸೆಸೆಲ್ಸಿ ಉತ್ತೀರ್ಣರಾಗಿರಬೇಕು ಎಂಬ ಬಯಕೆ ಆಯೋಗಕ್ಕಿದ್ದು, ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕವಾಗಿ ಸಹಾಯ ಮಾಡಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಶಿಕ್ಷಣ ಕೊರತೆಯ ಕಾರಣ ಇನ್ನು ಹಲವು ಅನಿಷ್ಟ ಪದ್ಧತಿಗಳು ಜೀವಂತವಾಗಿದೆ. ಶೈಕ್ಷಣಿಕವಾಗಿ ಮುಂದುವರೆದ ರಾಜ್ಯ ಮೂಢನಂಬಿಕೆ ಹಾಗೂ ಅನಿಷ್ಟ ಪದ್ಧತಿಗಳಿಂದ ದೂರವಾಗಲಿದೆ. ಕರ್ನಾಟಕ ರಾಜ್ಯವನ್ನು ಶೈಕ್ಷಣಿಕ ರಾಜ್ಯವನ್ನಾಗಿಸುವ ಗುರಿ ಮಕ್ಕಳ ಹಕ್ಕು ಆಯೋಗಕ್ಕಿದೆ ಎಂದರು. ಬಡತನದ ಕಾರಣದಿಂದ ಪಾಲಕರು ಮಕ್ಕಳನ್ನು ದುಡಿಯಲು ಕಳುಹಿಸುತ್ತಿದ್ದು, ಇದರ ವಾಸ್ತವ ಅರಿವಿದ್ದರೂ ಅಂಕೆ ಸಂಖ್ಯೆಗಳು ಲೆಕ್ಕಕ್ಕೆ ಸಿಗುತ್ತಿಲ್ಲ. ಬಾಲ್ಯ ವಿವಾಹ ನಡೆದ ಬಗ್ಗೆ ಹಲವು ದಾಖಲೆಗಳು ನಾಶವಾಗುತ್ತಿವೆ. ಇವೆಲ್ಲದಕ್ಕೂ ಶಿಕ್ಷಣ ಜಾಗೃತಿ ಆಗದಿರುವುದೇ ಕಾರಣವಾಗಿದ್ದು, ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣದ ಮೂಲಕ ರಾಜ್ಯವನ್ನು ಮಾದರಿಯನ್ನಾಗಿಸಬೇಕಿದೆ. ಅಲ್ಲದೇ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆಯೂ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

ಮೊದಲ ಹಂತವಾಗಿ 5ನೆ ತರಗತಿಯವರೆಗೆ ಕಲಿತು ನಂತರ ಶಾಲೆ ಬಿಟ್ಟವರನ್ನು ಗುರುತಿಸಿ ಮತ್ತೆ ಕಲಿಸುವ ಪ್ರಯತ್ನ ಮಾಡಲಾಗುವುದು. ಈ ಮೂಲಕ ಸಮಾಜದ ಪರಿವರ್ತನೆಗೆ ಪ್ರಯತ್ನಿಸಲಾಗುವುದು. ಸರಕಾರದಿಂದಲೂ ಶಾಲೆಗಳ ಸಾಮಾಜಿಕ ಗಣತಿ ಕೆಲಸ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

ಮಕ್ಕಳ ಹಕ್ಕು ಆಯೋಗ ಸಮಿತಿ ಸದಸ್ಯ ಕೆ.ಬಿ ರೂಪಾ ನಾಯ್ಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಪ್ರಸಾದ ಮನೋಹರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News