×
Ad

ಇನ್ನೊಬ್ಬರ ಹಸಿವು ಅರಿಯುವ ವಿಶಿಷ್ಟ ಚಿಂತನೆ ರಮಝಾನ್

Update: 2016-06-14 13:21 IST

ರಮಝಾನ್ ಎಂಬುದು ಮುಸ್ಲಿಂ ಧರ್ಮದ ಪವಿತ್ರ ತಿಂಗಳು. ಈ ತಿಂಗಳ 30 ದಿನಗಳಲ್ಲಿ ಮುಸ್ಲಿಂ ಬಂಧುಗಳು ತಮ್ಮ ದೇಹವನ್ನು ದಂಡಿಸಿ, ಹಗಲು ಹೊತ್ತಿನಲ್ಲಿ ಸಂಪೂರ್ಣ ಆಹಾರ ತ್ಯಜಿಸಿ ಉಪವಾಸ ವ್ರತ ಕೈಗೊಂಡು ದೇವರ ಸ್ಮರಣೆ ಮಾಡುವುದು. ದಾನ ಧರ್ಮಗಳನ್ನು ಮಾಡುತ್ತಾ ಇನ್ನೊಬ್ಬರ ನೋವು, ಸಂಕಷ್ಟ, ದುಖ, ದುಮ್ಮಾನಗಳಿಗೆ ಧ್ವನಿಯಾಗುವುದನ್ನು ಇತರ ಯಾವುದೇ ಧರ್ಮಗಳಲ್ಲಿ ಕಾಣಲು ಸಾಧ್ಯವಿಲ್ಲ. ನಾನು ಕಂಡಂತೆ ಈ ಪವಿತ್ರವಾದ ದಿನಗಳಲ್ಲಿ ಉಪವಾಸ ವ್ರತ ಆಚರಿಸುವವರು ಧರ್ಮದ ಬಗ್ಗೆ ಅಪಾರವಾದ ಭಕ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ, ಇತರ ಬಡವರಿಗೆ, ಆಶಕ್ತರಿಗೆ ದಾನ ಧರ್ಮ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಮಹಿಳೆ, ಪುರುಷರು, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಅನ್ನಾಹಾರ ತ್ಯಜಿಸಿ ದೇವರ ಪ್ರಾರ್ಥನೆ ಮಾಡುತ್ತಿರುವುದು ಸ್ವ ಹಸಿವನ್ನು ಅನುಭವಿಸುತ್ತಾ ಇನ್ನೊಬ್ಬರ ಹಸಿವನ್ನು ಗಮನಿಸುವ ವಿಶಿಷ್ಟ ಚಿಂತನೆಯಾಗಿದೆ ರಮಝಾನ್ ಉಪವಾಸ.

ರಮಝಾನ್ ಉಪವಾಸ ಬಿಡಿಸುವ ಇಫ್ತಾರ್ ಕೂಟಗಳು ಅಲ್ಲಲ್ಲಿ ನಡೆಯುತ್ತಿದೆ. ನನ್ನನ್ನು ಹಲವು ಗೆಳೆಯರು ಇಫ್ತಾರ್ ಕೂಟಕ್ಕೆ ಅಹ್ವಾನಿಸುತ್ತಾರೆ. ಅವರೊಂದಿಗೆ ಬೆರೆತು ಇಫ್ತಾರ್‌ನ ಖುಶಿಯನ್ನು ನಾನು ಅನುಭವಿಸಿದ್ದೇನೆ. ನಾನು ಕಂಡಂತೆ ಉಪವಾಸ ಎಂಬುದು ಕೇವಲ ಹಸಿದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಸೀಮಿತವಲ್ಲ. ಅದರೊಂದಿಗೆ ಇನ್ನೊಬ್ಬರ ಹಸಿವಿನ ಬೆಲೆಯನ್ನು ತಿಳಿಯುವುದು, ಶ್ರೀಮಂತ-ಬಡವ ಎಂಬ ತಾರತಮ್ಯ ತೊರೆದು ಎಲ್ಲರೂ ದೇವರ ಮುಂದೆ ಒಂದೇ ಎಂಬ ಸಮಾನತೆಯನ್ನು ಸಾರುವುದು. ಮನುಷ್ಯ ಜೀವದ ಬೆಲೆಯನ್ನು ತಿಳಿಯುವ ಮಹತ್ತರವಾದ ಕಾರ್ಯವಾಗಿದೆ. ಇದೊಂದು ಸಮಾನತೆಯ ಸಂಕೇತವಾಗಿದೆ.

ದೇವರು ಎಲ್ಲರಿಗೂ ಒಂದೇ. ಜಾತಿ, ಧರ್ಮಗಳು ನಾವು ಮಾಡಿಕೊಂಡಿರುವ ವ್ಯವಸ್ಥೆಗಳು, ಒಳ್ಳೆಯವರು, ಕೆಟ್ಟವರು ಎಲ್ಲರಲ್ಲೂ ಇದ್ದಾರೆ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಎಂದೂ ನಮ್ಮನ್ನು ಕಾಪಾಡುತ್ತದೆ ಎಂಬ ದೃಢ ನಂಬಿಕೆಯಿರುವ ನಾನು ಕಳೆದ 20 ವರ್ಷಗಳಿಂದ ಸ್ವತಃ ಇಪ್ತಾರ್ ಕೂಟ ನಡೆಸಿಕೊಂಡು ಬರುತ್ತಿದ್ದೇನೆ. ಈ ಕೂಟದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಹಲವಾರು ಮಂದಿ ಜಾತಿ ಧರ್ಮಗಳ ಭೇದವಿಲ್ಲದೆ ಭಾಗವಹಿಸುತ್ತಾರೆ. ಈ ಕೆಲಸವನ್ನು ಪವಿತ್ರ ಮತ್ತು ಶ್ರೇಷ್ಠ ಎಂದು ನಂಬಿದವನು ನಾನು. ಇದೊಂದು ಪುಣ್ಯದ ಕೆಲಸವಾಗಿದ್ದು ಇದರ ಬಗ್ಗೆ ನನಗೆ ಅಪಾರವಾದ ಗೌರವ ಮತ್ತು ಶ್ರದ್ಧೆಯಿದೆ.

ನಾನೋರ್ವ ಹಿಂದೂವಾಗಿದ್ದರೂ ಮುಸ್ಲಿಂ, ಕ್ರಿಶ್ಚನ್ ಮತ್ತು ಇತರ ಎಲ್ಲಾ ಧರ್ಮದವರೊಂದಿಗೆ ಗೌರವ ಮತ್ತು ಭಕ್ತಿ ಹೊಂದಿದವನಾಗಿದ್ದೇನೆ. ಆದ ಕಾರಣ ರಮಝಾನ್ ನನಗೆ ಮುಸ್ಲಿಮರಂತೆ ಪರಮ ಪವಿತ್ರ ಮತ್ತು ಭಕ್ತಿಯ ತಿಂಗಳಾಗಿದೆ. ಪವಿತ್ರ ರಮಝಾನ್ ಜಗತ್ತಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡಲಿ.

ಕಾವು ಹೇಮನಾಥ ಶೆಟ್ಟಿ

ಮಾಜಿ ಆಡಳಿತ ಮೊಕ್ತೇಸರರು,

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ.

Writer - ಕಾವು ಹೇಮನಾಥ ಶೆಟ್ಟಿ

contributor

Editor - ಕಾವು ಹೇಮನಾಥ ಶೆಟ್ಟಿ

contributor