ಬೆಂಗಳೂರು ಅಭಿವೃದ್ಧಿಗೆ 7300 ಕೋಟಿ ರೂ.ಅನುದಾನ: ಮುಖ್ಯಮಂತ್ರಿ
ಬೆಂಗಳೂರು, ಜೂ.14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರಕಾರವು 7300 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಸ್ತೆಗಳಿಗೆ 2976 ಕೋಟಿ ರೂ., ಮಳೆ ನೀರು ಕಾಲುವೆಗೆ 1 ಸಾವಿರ ಕೋಟಿ ರೂ., ಗ್ರೇಡ್ ಸಪರೇಟರ್‌ಗಳಿಗೆ 153 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ರಸ್ತೆ ನಿರ್ಮಾಣಕ್ಕೆ 250 ಕೋಟಿ ರೂ, ಘನತ್ಯಾಜ್ಯ ವಿಲೇವಾರಿಗಾಗಿ 600 ಕೋಟಿ ರೂ.ಸೇರಿದಂತೆ ಬಿಬಿಎಂಪಿಗೆ ರಾಜ್ಯ ಸರಕಾರವು ಒಟ್ಟು 7300 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಅಲ್ಲದೆ, 110 ಹಳ್ಳಿಗಳಿಗೆ 10 ಟಿಎಂಸಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಪರಿಷ್ಕೃತ ಅಂದಾಜು 5018 ಕೋಟಿ ರೂ.ಗಳಿಗೆ ಸರಕಾರ ಅನುಮೋದನೆ ನೀಡಿದೆ. ಇದಕ್ಕಾಗಿ ಜೈಕಾದಿಂದ ಹಣಕಾಸಿನ ನೆರವು ಪಡೆಯಲಾಗುವುದು. ಅಲ್ಲದೆ, ರಾಜ್ಯ ಸರಕಾರದ ಪಾಲನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ ಮಳೆ ನೀರು ಕಾಲುವೆಯಿದ್ದು, ಈ ಪೈಕಿ 115.8 ಕಿ.ಮೀಗೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದೆ. 200 ಕೋಟಿ ರೂ.ವೆಚ್ಚದಲ್ಲಿ 25 ಕಿ.ಮೀ ತಡೆಗೋಡೆ ನಿರ್ಮಿಸಲಾಗುತ್ತಿದೆ. ಈ ವರ್ಷ ಹೊಸದಾಗಿ 800 ಕೋಟಿ ರೂ.ವೆಚ್ಚದಲ್ಲಿ 125 ಕಿ.ಮೀ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಸ್ಯಾಟಲೈಟ್ ಬಸ್‌ನಿಲ್ದಾಣ ಬಳಿ 900 ಮೀಟರ್ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಈಗಾಗಲೆ 600 ಮೀಟರ್ ಮುಗಿದಿದ್ದು, ಇನ್ನುಳಿದ 300 ಮೀಟರ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇದಕ್ಕಾಗಿ 6.5 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಮಳೆಗಾಲದ ಸಂದರ್ಭದಲ್ಲಿ ಗಾಳಿ ಆಂಜನೇಯ ದೇವಸ್ಥಾನದೊಳಗೆ ನೀರು ನುಗ್ಗುವುದು ಸಾಮಾನ್ಯವಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಸ್ಥಳದಲ್ಲಿ ನಿರ್ಮಿಸಲಾಗು ತ್ತಿರುವ ಮೇಲ್ಸೆತುವೆ ಕಾಮಗಾರಿಯನ್ನು 20 ದಿನಗಳಲ್ಲಿ ಪೂರ್ಣಗೊಳಿಸಬೇಕು. ಮೈಸೂರು ರಸ್ತೆಯಲ್ಲಿರುವ ಕವಿಕಾ ಬಳಿ ಪ್ರಗತಿ ಹಂತದಲ್ಲಿರುವ ಮೇಲ್ಸೆತುವೆಯನ್ನು ಜುಲೈ ಅಂತ್ಯಕ್ಕೆ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ತುಮಕೂರು ರಸ್ತೆ-ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೆಪಿಟಿಸಿಎಲ್‌ಗೆ ಸೇರಿದ ಎರಡು ಎಕರೆ ಭೂಮಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ವಾಹನ ಸವಾರರಿಗೆ ಸುಮಾರು 10 ಕಿ.ಮೀ ಸಂಚರಿಸುವುದು ತಪ್ಪುತ್ತದೆ. 5 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಈ ಕಾಮಗಾರಿಯನ್ನು ಆ.15ರೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಜಾಲಹಳ್ಳಿ ಬಳಿ ನಿರ್ಮಿಸಲಾಗುತ್ತಿರುವ ಮೇಲ್ಸೆತುವೆಗೆ 10.5 ಗುಂಟೆ ಜಮೀನಿನ ಅಗತ್ಯವಿದ್ದು, ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಿ, 10 ದಿನಗಳಲ್ಲಿ ಭೂ ಸ್ವಾಧೀನಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿನ ಹೆಣ್ಣೂರುನಲ್ಲಿ 32 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್(ವನ ಉದ್ಯಾನವನ) ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸರಕಾರದ ವತಿಯಿಂದ 5 ಕೋಟಿ ರೂ.ನೆರವು ನೀಡಲಾಗಿದೆ. ಈ ಉದ್ಯಾನವನದಲ್ಲಿ ವಾಯು ವಿಹಾರಿಗಳು ಸಂಚರಿಸಲು ಪಥ, ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಜು.15ರಂದು ಅಲ್ಲಿ ವನಮಹೋತ್ಸವವನ್ನು ಆಚರಿಸಲಾಗುವುದು ಎಂದು ಅವರು ಹೇಳಿದರು.
ಹೆಣ್ಣೂರಿನ ವನ ಉದ್ಯಾನವನದ ಜಾಗವನ್ನು ಮಾಜಿ ಸಚಿವ ಬಿ.ಬಸವಲಿಂಗಪ್ಪ ಸಂರಕ್ಷಣೆ ಮಾಡಿದ್ದರು. ಆದುದರಿಂದ, ಈ ಉದ್ಯಾನವನಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಬಿಬಿಎಂಪಿ ಮೇಯರ್‌ಗೆ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆ.ಆರ್.ಪುರ ಕ್ಷೇತ್ರದ ಚಳ್ಳಕೆರೆ ಪಕ್ಕದಲ್ಲಿ ಒತ್ತುವರಿಯಾಗಿದ್ದ ಸರಕಾರಿ ಜಾಗವನ್ನು ಜಿಲ್ಲಾಧಿಕಾರಿ ತೆರವುಗೊಳಿಸಿದ್ದಾರೆ. ಸ್ಥಳದಲ್ಲಿ ಮಳೆ ನೀರು ಕಾಲುವೆಯನ್ನು 25 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ ವರ್ಷ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ 1 ಸಾವಿರ ಕೋಟಿ ರೂ.ನೀಡಲಾಗಿತ್ತು. 198 ವಾರ್ಡುಗಳಲ್ಲಿ 797 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಅವರು ಸಿದ್ದರಾಮಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಮಂಜುನಾಥರೆಡ್ಡಿ, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಶಾಸಕರಾದ ಭೈರತಿ ಬಸವರಾಜು, ಮುನಿರತ್ನ, ಎಸ್.ಟಿ. ಸೋಮಶೇಖರ್, ವಿನಿಶಾ ನಿರೋ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.