×
Ad

ಪೊಲೀಸ್ ಇಲಾಖೆಯ ‘ಆಡರ್ಲಿ’ ವ್ಯವಸ್ಥೆ ಹಿಂದಕ್ಕೆ: ಡಾ.ಜಿ.ಪರಮೇಶ್ವರ್

Update: 2016-06-14 21:59 IST

ಬೆಂಗಳೂರು, ಜೂ.14: ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಮೂರ್ನಾಲ್ಕು ಮಂದಿ ಸಹಾಯಕರನ್ನು ನೇಮಿಸುವ ಆಡರ್ಲಿ ವ್ಯವಸ್ಥೆಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪೊಲೀಸ್ ಸಿಬ್ಬಂದಿಗಳಿಗೆ ಕಲ್ಪಿಸಬೇಕಾಗಿರುವ ವಿವಿಧ ಸೌಲಭ್ಯಗಳ ಕುರಿತು ಸಮಾಲೋಚನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಆಡರ್ಲಿ ವ್ಯವಸ್ಥೆ ಯನ್ನು ಹಿಂಪಡೆಯುವುದರಿಂದ ಲಭ್ಯವಾಗುವ ಸುಮಾರು 2500 ಮಂದಿ ಕಾನ್ಸ್‌ಟೇಬಲ್‌ಗಳು ನೇರವಾಗಿ ಪೊಲೀಸ್‌ಪಡೆಗೆ ಸೇರಲಿದ್ದಾರೆ. ‘ಡಿ’ ದರ್ಜೆ ನೌಕರರ ಮಾದರಿಯಲ್ಲಿ ಪ್ರತ್ಯೇಕವಾಗಿ ನೇಮಕಾತಿ ನಡೆಸಿ ಹಿರಿಯ ಅಧಿಕಾರಿಗಳಿಗೆ ಸಹಾಯಕರನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. ಬೆಂಗಳೂರು ನಗರದಿಂದಲೆ ಈ ಆಡರ್ಲಿ ವ್ಯವಸ್ಥೆಯನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಲಾಗುವುದು. ಆನಂತರ, ಹಂತ ಹಂತವಾಗಿ ಎಲ್ಲ ಜಿಲ್ಲೆಗಳಿಂದಲೂ ಈ ವ್ಯವಸ್ಥೆಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ದ್ವಿತೀಯ ದರ್ಜೆ ಸಹಾಯಕರ ಮೂಲ ವೇತನ ಸಮಾನವಾಗಿದೆ. ಆದರೆ, ಕಾರ್ಯಸ್ವರೂಪ, ಭತ್ತೆಗಳು ವಿಭಿನ್ನವಾಗಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಾರತಮ್ಯ ನಿವಾರಿಸಲು ವೇತನ ಆಯೋಗದ ಮುಂದೆ ಶಿಫಾರಸ್ಸು ಮಾಡಲು ಉದ್ದೇಶಿಸಿದ್ದು, ಇದಕ್ಕಾಗಿ ಐದು ಮಂದಿಯನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಿ, ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗುವುದು ಎಂದು ಅವರು ಹೇಳಿದರು.

ಗುಪ್ತಚರ, ಸಿಐಡಿ ಹಾಗೂ ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿಗೆ ಕಠಿಣವಾದ ಕಾರ್ಯಗಳಿಗಾಗಿ ವಿಶೇಷ ಭತ್ತೆ ನೀಡಲಾಗುತ್ತಿದೆ. ಅದನ್ನು ಪೊಲೀಸ್ ಕಾನ್ಸ್‌ಟೇಬಲ್ ಗಳಿಗೂ ನೀಡುವ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಎಎಸ್ಸೈ, ಪಿಎಸ್ಸೈ, ಪಿಐ, ಡಿವೈಎಸ್ಪಿ ಅಧಿಕಾರಿಗಳಿಗೂ ಗೆಜೆಟೆಡ್ ರಜೆಗಳನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಪೊಲೀಸ್‌ಕಾನ್ಸ್‌ಟೇಬಲ್‌ಗಳಿಗೆ ಸರಕಾರದ ವತಿಯಿಂದ ಪಡಿತರ ನೀಡುವ ಬದಲು ನಗದು ಹಣ(ತಲಾ 500-600 ರೂ.)ವನ್ನು ಅವರ ವೇತನದೊಂದಿಗೆ ಸೇರಿಸಿ ನೀಡಲಾಗುವುದು. ಇದಲ್ಲದೆ, ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುವ ಪೊಲೀಸ್‌ಸಿಬ್ಬಂದಿಗೆ ಇತರೆ ಇಲಾಖೆಯ ಸಿಬ್ಬಂದಿಗೆ ನೀಡುವ ಪ್ರಮಾಣದಲ್ಲಿ ಭತ್ತೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯದ ಹಣಕಾಸು ಇಲಾಖೆಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.

ಕಾರ್ಯಾಚರಣೆ ಸಂದರ್ಭದಲ್ಲಿ ಹುತಾತ್ಮರಾಗುವ ಪೊಲೀಸ್‌ಸಿಬ್ಬಂದಿಯ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರ ಹಾಗೂ 20 ಲಕ್ಷ ರೂ.ವಿಮೆ ಸೇರಿದಂತೆ 50 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 20 ಲಕ್ಷ ರೂ.ಪರಿಹಾರ ಹಾಗೂ ವಿಮೆಯನ್ನು ಕಲ್ಪಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ವಸತಿ ಸಮುಚ್ಚಯಗಳ ದುರಸ್ಥಿಗೆ 100 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಪ್ರತಿಯೊಬ್ಬ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಯೂ ಅವರ ವ್ಯಾಪ್ತಿಯಲ್ಲಿರುವ ಪೊಲೀಸ್ ವಸತಿ ಸಮುಚ್ಚಯಗಳು ವಾಸಕ್ಕೆ ಯೋಗ್ಯವಾಗಿದೆಯೊ, ಇಲ್ಲವೋ ಎಂಬುದರ ಕುರಿತು ಸಹಾಯಕ ಎಂಜಿನಿಯರ್ ಅವರಿಂದ ದೃಢೀಕರಿಸಿ 15 ದಿನಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಪೊಲೀಸ್‌ಗೃಹ ಯೋಜನೆಯಡಿ ಸಿಬ್ಬಂದಿಗೆ 1818 ಕೋಟಿ ರೂ.ವೆಚ್ಚದಲ್ಲಿ 11 ಸಾವಿರ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 800 ಕೊಟಿ ರೂ.ಗಳನ್ನು ಖರ್ಚು ಮಾಡಲಾಗುವುದು. ಬೆಂಗಳೂರಿನ ಆನಂದ್‌ರಾವ್ ವೃತ್ತದಲ್ಲಿ ಪೊಲೀಸ್ ಅತಿಥಿಗೃಹ ನಿರ್ಮಿಸಲಾಗುವುದು. ವಾರದ ರಜೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿಕೊಠಡಿ, ಮಕ್ಕಳಿಗಾಗಿ ಡೇ ಕೇರ್, ಅವರ ಅನುಕೂಲಕ್ಕೆ ತಕ್ಕ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುವುದು. ಕೆಎಸ್‌ಆರ್‌ಪಿಗೆ ಹೊಸದಾಗಿ 163 ಬಸ್‌ಗಳನ್ನು ಖರೀದಿಸಲಾಗಿದ್ದು, 15 ದಿನಗಳಲ್ಲಿ ಹಸ್ತಾಂತರಿಸಲಾಗುವುದು. ಪೊಲೀಸರ ಮಕ್ಕಳಿಗಾಗಿ ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News