ಯಾರಿಂದಲೂ ಹಣ ಪಡೆದಿಲ್ಲ, ಆಣೆಗೂ ಸಿದ್ಧ: ಭಿನ್ನರಿಗೆ ಎಚ್.ಡಿ.ರೇವಣ್ಣ ಸವಾಲು
ಬೆಂಗಳೂರು, ಜೂ. 14: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಂದಲೂ ಹಣ ಪಡೆದಿಲ್ಲ. ಈ ಬಗ್ಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಮೈಸೂರಿನ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲು ಸಿದ್ಧ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸವಾಲು ಹಾಕಿದ್ದಾರೆ.
ಮಂಗಳವಾರ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಅಮಾನತ್ತುಗೊಂಡಿರುವ ಶಾಸಕರು ನೂತನ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅವರನ್ನು ಕರೆತರಲಿ. ಅವರೂ ಶಾಸಕರಿಗೆ ಹಣ ನೀಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಭಿನ್ನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೂತನ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಒಂದು ಪೈಸೆಯನ್ನು ಖರ್ಚು ಮಾಡದೆ ಅತ್ಯಂತ ಹೆಚ್ಚು ಮತಗಳನ್ನು ಪಡೆದಿದ್ದು ಹೇಗೆ ಎಂದು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ ರೇವಣ್ಣ, ಒಳ್ಳೆಯ ಅಧಿಕಾರಿ ಎಂಬ ಕಾರಣಕ್ಕೆ ಶಾಸಕರು ಅವರನ್ನು ಗೆಲ್ಲಿಸಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಅದು ನನಗೆ ಗೊತ್ತಿಲ್ಲ: ರಾಜ್ಯಸಭೆ, ಮೇಲ್ಮನೆ ಅಭ್ಯರ್ಥಿಗಳಿಂದ ಪಕ್ಷಕ್ಕೆ ಹಣ ಪಡೆದಿದ್ದಾರೋ-ಇಲ್ಲವೋ ಅದು ನನಗೆ ಸಂಬಂಧಿಸಿದ್ದಲ್ಲ. ನಾನಂತೂ ಯಾರಿಂದಲೂ ಬಿಡಿಗಾಸನ್ನು ಪಡೆದಿಲ್ಲ ಎಂದು ಸ್ಪಷ್ಟಣೆ ನೀಡಿದ ಅವರು, ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ತಮ್ಮ ಪಕ್ಷದ ಚಟುವಟಿಕೆಗಳಿಗೆ ಅವರ ಮನೆಯಿಂದ ಹಣ ತಂದಿದ್ದಾರೆಯೇ ಎಂದು ಟೀಕಿಸಿದರು.
ಕ್ಷೇತ್ರದ ಜನತೆಯ ಸೇವಕ: ಮುಖ್ಯಮಂತ್ರಿ ಸಿದ್ಧರಾಮಯ್ಯರ ಬಗ್ಗೆ ನನಗೆ ಅಪಾರ ಗೌರವವಿದೆ. ಕ್ಷೇತ್ರದ ಜನತೆಯ ಸಮಸ್ಯೆಗಳ ಪರಿಹಾರಕ್ಕೆ ಸಿಎಂ ಭೇಟಿ ಮಾಡಿದ್ದೇನೆ ಹೊರತು, ತಾನು ಯಾವುದೇ ಭೂಮಿ ಡಿ-ನೋಟಿಫೈ ಮಾಡಿಸಿಕೊಳ್ಳಲು ಹೋಗಿಲ್ಲ ಎಂದು ತಿರುಗೇಟು ನೀಡಿದರು.