×
Ad

ಶೋಷಕರೆಲ್ಲರೂ ಬ್ರಾಹ್ಮಣರೇ: ರಮೇಶ್ ಕುಮಾರ್

Update: 2016-06-14 22:44 IST

ಬೆಂಗಳೂರು, ಜೂ.14: ಭಾರತದ ಮಟ್ಟಿಗೆ ಹೇಳುವುದಾದರೆ ಶೋಷಕರೆಲ್ಲರೂ ಬ್ರಾಹ್ಮಣರಾದರೆ, ಶೋಷಣೆಗೆ ಒಳಗಾಗುವರೆಲ್ಲರೂ ದಲಿತರು ಹಾಗೂ ಎಲ್ಲ ಜಾತಿಯ ಮಹಿಳೆಯರಾಗಿದ್ದಾರೆ ಎಂದು ಶಾಸಕ ರಮೇಶ್ ಕುಮಾರ್ ಅಭಿಪ್ರಾಯಿಸಿದ್ದಾರೆ.
ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ ನಗರದ ಶಿವರಾತ್ರೀಶ್ವರ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಧರ್ಮನಿರಪೇಕ್ಷ ರಾಜಕಾರಣ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲೂ ಬ್ರಾಹ್ಮಣರೆ ಹಿಡಿತ ಸಾಧಿಸಿದ್ದಾರೆ. ಅವರು ಹೇಳಿದ ರೀತಿಯಲ್ಲಿ ಈ ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಶೂದ್ರರನ್ನು, ದಲಿತರನ್ನು ಹಾಗೂ ಎಲ್ಲ ಜಾತಿಯ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೇವಲ ಮೂರು ದಶಕದ ಹಿಂದೆ ಹಳ್ಳಿಗಳಲ್ಲಿ ನಡೆಯುತ್ತಿದ್ದ ಜಾತ್ರೆಗಳನ್ನು ಜಾತಿ, ಧರ್ಮಾತೀತವಾಗಿ ಎಲ್ಲರೂ ಸೇರಿ ಆಚರಿಸುತ್ತಿದ್ದರು. ಆದರೆ, ಈಗ ಕೋಮುವಾದಿಗಳು ಜಾತ್ರೆಗಳನ್ನು ಕೇಸರಿಮಯಗೊಳಿಸಿದ್ದಾರೆ. ಎಲ್ಲೆಲ್ಲೂ ಕೇಸರಿ ಬಾವುಟಗಳನ್ನು ಕಟ್ಟಿ ಮೂಲ ಆಶಯವನ್ನು ತಿರುಚುತ್ತಿದ್ದಾರೆ. ಇದರ ವಿರುದ್ಧ ಹಳ್ಳಿಯ ಪ್ರಜ್ಞಾವಂತ ಯುವಕರು ಪ್ರಶ್ನಿಸಬೇಕು ಎಂದು ಅವರು ಹೇಳಿದರು.

ಸರಕಾರಗಳು ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಕೊಡುವಂತಿಲ್ಲ. ಸಾರ್ವಜನಿಕರ ಹಣವನ್ನು ಒಂದು ಖಾಸಗಿ ಸಂಸ್ಥೆಗಳಿಗೆ ಕೊಡುವ ಹಾಗಿಲ್ಲ. ಆದರೆ, ಸ್ವಾರ್ಥ ರಾಜಕಾರಣಿಗಳು ತಮ್ಮ ಅಧಿಕಾರದ ದಾಹಕ್ಕಾಗಿ ತೆರಿಗೆ ಹಣವನ್ನು ದುರುಪಯೋಗ ಪಡಿಸುತ್ತಿದ್ದಾರೆ ಎಂದು ರಮೇಶ್‌ಕುಮಾರ್ ಕಿಡಿಕಾರಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಹಿರಿಯ ಸಾಹಿತಿ ಡಾ.ಕೆ.ಷರಿಪಾ ಹಾಗೂ ಕವಿ ಎಲ್.ಎನ್.ಮುಕುಂದರಾಜು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News