ಡಾ.ಸರೋಜಿನಿ ಮಹಿಷಿ ವರದಿಯ ಪುನರ್ ಪರಿಶೀಲನಾ ಸಮಿತಿ ರಚನೆ
Update: 2016-06-14 22:45 IST
ಬೆಂಗಳೂರು, ಜೂ.14: ಕರ್ನಾಟಕದಲ್ಲಿರುವ ಕೇಂದ್ರ ಸ್ವಾಮ್ಯದ ಉದ್ದಿಮೆ, ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ, ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ದೃಷ್ಟಿಯಿಂದ ಸರಕಾರ ರಚಿಸಿದ್ದ ಡಾ. ಸರೋಜಿನಿ ಮಹಿಷಿ ವರದಿಯನ್ನು ಇಂದಿನ ಕಾಲಘಟ್ಟಕ್ಕೆ ಹೊಂದುವ ರೀತಿಯಲ್ಲಿ ಸಮಗ್ರವಾಗಿ ಪರಿಷ್ಕರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆಯಲ್ಲಿ ‘ಡಾ.ಸರೋಜಿನಿ ಮಹಿಷಿ ವರದಿಯ ಪುನರ್ ಪರಿಶೀಲನಾ ಸಮಿತಿ’ಯನ್ನು ರಚಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಈ ಸಮಿತಿಯಲ್ಲಿ ಕರ್ನಾಟಕ ನಾಟಕ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಸಾಹಿತಿಗಳಾದ ಹೇಮಲತಾ ಮಹಿಷಿ, ಕರ್ನಾಟಕ ಕಾರ್ಮಿಕ ಲೋಕ ಪತ್ರಿಕೆಯ ಸಂಪಾದಕ ರಾ.ನಂ.ಚಂದ್ರಶೇಖರ್ ಅವರನ್ನು ಸದಸ್ಯರಾಗಿ ನೇಮಕ ಮಾಡಿದೆ.