×
Ad

ಲಿಕ್ಕರ್ ಲಾಬಿಗೆ ಪೊಲೀಸರು ತಲೆಬಾಗಿದ್ದಾರೆ: ಅನುಪಮಾ ಶೆಣೈರ ಮತ್ತೊಂದು ಪತ್ರ?

Update: 2016-06-14 22:49 IST

ಬೆಂಗಳೂರು, ಜೂ. 14: ಕೂಡ್ಲಿಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಗೃಹ ಕಾರ್ಯದರ್ಶಿಗಳಿಗೂ ರಾಜೀನಾಮೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ರಾಜೀನಾಮೆ ಪತ್ರ ಇಲ್ಲಿದೆ:  ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ಎರಡನೆ ರಾಜೀನಾಮೆ ಪತ್ರದಲ್ಲಿ ಅಕ್ರಮ ಮದ್ಯವನ್ನು ನಿರ್ಮೂಲನ ಮಾಡುವ ಕುರಿತು ಕಟ್ಟುನಿಟ್ಟಿನ ಕ್ರಮ ಜರಗಿಸಲಾಗಿದೆ. ಕೂಡ್ಲಿಗಿ ವ್ಯಾಪ್ತಿ ಲಿಕ್ಕರ್ ಲಾಬಿ ಪ್ರಬಲವಾಗಿದ್ದು, ಕೂಡ್ಲಿಗಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಪಿಐ ಲಿಕ್ಕರ್ ಲಾಬಿಗೆ ತಲೆಬಾಗಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ ಎನ್ನಲಾಗಿದೆ.
 ಲಿಕ್ಕರ್ ಲಾಬಿಯ ಹಿಂದೆ ರಾಜಕೀಯ ಪ್ರಭಾವಿ ವ್ಯಕ್ತಿಗಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಅಲ್ಲದೆ, ಇದಕ್ಕೆ ಸಿಪಿಐ ಹಾಗೂ ಪಿಎಸ್‌ಐ ಕುಮ್ಮಕ್ಕು ಇದೆ ಎಂದು ಪತ್ರದಲ್ಲಿ ಆಪಾದಿಸಿರುವ ಅವರು, ಪ್ರತಿಭಟನೆಯನ್ನು ತಡೆಯುವಲ್ಲಿ ನಾನು ಪೂರ್ತಿ ನಿಷ್ಕ್ರಿಯಳಾಗಿರುತ್ತೇನೆ. ಈ ಬಗ್ಗೆ ಇಲಾಖೆಯ ಶಿಸ್ತಿನ ಕ್ರಮಕ್ಕೆ ನಾನು ಬದ್ಧಳಾಗಿದ್ದೇನೆ, ನಡೆದಿರುವ ಘಟನೆಗಳಿಂದ ನೊಂದು ನಾನು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಪತ್ರದಲ್ಲಿ ಅನುಪಮಾ ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ.

ಅನುಪಮಾರ ವಿಚಾರಣೆ ನಡೆಸಿಲ್ಲ ಡಾ.ಜಿ. ಪರಮೇಶ್ವರ್ ಸ್ಪಷ್ಟನೆ
ಬೆಂಗಳೂರು, ಜೂ.14: ಕೂಡ್ಲಿಗಿ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈಯನ್ನು ಯಾವ ಅಧಿಕಾರಿಯೂ ವಿಚಾರಣೆಗೊಳಪಡಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಪಮಾ ಶೆಣೈ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ವೃತ್ತಿಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿ ರಾಜೀನಾಮೆ ಪತ್ರ ನೀಡಿದ್ದು, ಸರಕಾರ ಅದನ್ನು ಅಂಗೀಕರಿಸಿದೆ ಎಂದರು.
ಅನುಪಮಾ ಶೆಣೈಗೂ ಇಲಾಖೆಗೂ ಇನ್ನು ಯಾವುದೇ ಸಂಬಂಧವಿಲ್ಲ. ಅಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ರಾಜ್ಯ ಪೊಲೀಸ್ ಮಹಾ ಸಂಘದ ಮುಖ್ಯಸ್ಥ ಶಶಿಧರ್ ವಿರುದ್ಧ ತನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಮ್ಮ ಇಲಾಖೆಯಲ್ಲಿದ್ದು ಅಮಾನತು ಆಗಿ ಹೋದ ನೌಕರರಾದ ಅವರು ಹೊರಗೆ ಇದ್ದುಕೊಂಡು ಪ್ರಚೋದನೆ ಮಾಡುತ್ತಿದ್ದ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಶಶಿಧರ್ ನಮಗೆ ಯಾವ ಬೇಡಿಕೆಯನ್ನು ಇಟ್ಟಿಲ್ಲ. ಅಷ್ಟಕ್ಕೂ ಅವರು ನಡೆಸುತ್ತಿರುವ ಸಂಘಟನೆ ಸರಕಾರದ ಮಾನ್ಯತೆಯನ್ನೇ ಪಡೆದಿಲ್ಲ. ತನ್ನ ವಿರುದ್ಧ ಶಶಿಧರ್ ಲಾಭದಾಯಕ ಹುದ್ದೆ ಹೊಂದಿರುವ ಮೊಕದ್ದಮೆ ದಾಖಲಿಸಿದ್ದಾರೆ. ತಾನು ಲಾಭದಾಯಕ ಹುದ್ದೆಯಲ್ಲಿದ್ದರೆ ಮುಖ್ಯಮಂತ್ರಿ ನನ್ನನ್ನು ವಜಾಗೊಳಿಸಲಿ ಎಂದು ಅವರು ಹೇಳಿದರು.
 ತಾನು ಕೆಪಿಸಿಸಿ ಅಧ್ಯಕ್ಷ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ವೇತನ ಪಡೆದುಕೊಂಡು, ಸಚಿವ ಸ್ಥಾನದಲ್ಲಿದ್ದರೆ ತಾನೇ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ತನ್ನ ವಿರುದ್ಧ ಅವರು ಮಾಡಿರುವ ಆರೋಪ ಸಾಬೀತಾದರೆ ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News