ಶಿಕ್ಷಣ ಸಂಸ್ಥೆಗಳು ಸಂಸ್ಕಾರ ಮೂಡಿಸುವ ಕೇಂದ್ರಗಳಾಗಲಿ: ಬೋಪಯ್ಯ
ಮಡಿಕೇರಿ, ಜೂ.14: ವಿದ್ಯಾಸಂಸ್ಥೆಗಳು ವ್ಯಾಪಾರೀಕರಣಕ್ಕೆ ಒಳಗಾಗದೆ, ಪಾಠ ಪ್ರವಚನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಮೂಡಿಸುವ ಕೇಂದ್ರಗಳಾಗಬೇಕೆಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಆಶಯ ವ್ಯಕ್ತಪಡಿಸಿದ್ದಾರೆ.
ಬೆಟ್ಟಗೇರಿ ಉದಯ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕಾರಯುತ ಪೀಳಿಗೆಯಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವೆಂದರು. ಈ ಎಲ್ಲ ವಿಚಾರಗಳ ಕುರಿತು ಅರಿವನ್ನು ಹೊಂದಿದ್ದ ನಮ್ಮ ಹಿರಿಯರು ವಿದ್ಯಾಕೇಂದ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದ್ದರು. ಅವರ ದೂರದೃಷ್ಟಿಯ ಚಿಂತನೆಗಳಿಂದ ಹಲವಷ್ಟು ಮಂದಿ ವಿದ್ಯಾವಂತರಾಗಿ ಉತ್ತಮ ಸ್ಥಾನಮಾನಗಳನ್ನು ಪಡೆದಿದ್ದಾರೆ. ಇದಕ್ಕೆ ಕಾರಣರಾದ ಹಿರಿಯ ದಾನಿಗಳನ್ನು ಸದಾ ಸ್ಮರಿಸುವಂತಾಗಬೇಕೆಂದರು. ಶಾಲಾ ಸಭಾಂಗಣ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಮಾತನಾಡಿ, ಕೊಡಗಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯರಂತಹ ಮಹಾನ್ ವ್ಯಕ್ತಿಗಳನ್ನು ಮಾದರಿಯಾಗಿರಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಸಾಧನೆಯನ್ನು ವಿದ್ಯಾರ್ಥಿಗಳು ಮಾಡಬೇಕೆಂದ ಅವರು, ವಿದ್ಯಾಸಂಸ್ಥೆಗೆ 5ಲಕ್ಷ ರೂ.ಅನುದಾನ ನೀಡುವ ಭರವಸೆ ನೀಡಿದರು.
ಜಿಪಂ ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ, ಕನ್ನಡ ಮಾಧ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು. ಶಾಲೆಗೆ ಸಹಾಯಧನ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ವಿದ್ಯಾಸಂಸ್ಥೆ ಒಂದು ದೇಗುಲವಿದ್ದಂತೆ. ವಿದ್ಯಾಸಂಸ್ಥೆಗಳು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಅಡಿಗಲ್ಲಾಗಿದ್ದು, ಈ ಹಾದಿಯಲ್ಲಿ ಎಲ್ಲರ ಸಹಕಾರ ಆವಶ್ಯಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ತಳೂರು ಎ.ಕಿಶೋರ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಸಂಸ್ಥೆಯಲ್ಲಿ 35ಲಕ್ಷ ರೂ. ವೆಚ್ಚದಲ್ಲಿ ಸಭಾ ಭವನ ನಿರ್ಮಿಸಲಾಗುವುದೆಂದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯೆ ತುಂತಜ್ಜೀರ ಕುಮುದಾ ರಶ್ಮಿ, ಬೆಟ್ಟಗೇರಿ ಗ್ರಾಪಂ ಅಧ್ಯಕ್ಷೆ ಬಿ. ಶಾಂತಿ, ಉಪಾಧ್ಯಕ್ಷೆ ಶಾಂತಿ ಸೋಮಣ್ಣ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್.ಗಣಪತಿ, ಸಂಸ್ಥೆಯ ಉಪಾಧ್ಯಕ್ಷ ಬೆಪ್ಪುರನ ಮೇದಪ್ಪ, ಸಂಸ್ಥೆಯ ನಿವೃತ್ತ ಶಿಕ್ಷಕಿಯರಾದ ಪೊನ್ನಮ್ಮ, ಪಾರ್ವತಿ, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ವಿದ್ಯಾಭಿಮಾನಿಗಳು ಪಾಲ್ಗೊಂಡಿದ್ದರು.