×
Ad

ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

Update: 2016-06-14 23:16 IST

ಕುಶಾಲನಗರ, ಜೂ.14: ಸರಕಾರದ ದ್ವಿಮುಖ ನೀತಿಯಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಉಪನ್ಯಾಸಕರನ್ನು ಕರ್ತವ್ಯದಿಂದ ತೆಗೆದು ಹಾಕಿರುವುದರಿಂದ ಉಪನ್ಯಾಸಕರಿಲ್ಲದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

 

ಇಲ್ಲಿನ ಸಮೀಪದ ಗರಗಂದೂರುವಿನಲ್ಲಿ 2015-2016ನೆ ಸಾಲಿನಿಂದ ಕರ್ನಾಟಕ ಸರಕಾರದ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ನಡೆಯುತ್ತಿದೆ. ಈ ಹಿಂದೆ ಈ ಕಾಲೇಜು ಮಡಿಕೇರಿಯ ಸರಸ್ವತಿ ಡಿಎಡ್ ಕಾಲೇಜು ಕಟ್ಟಡದಲ್ಲಿ ಪಾಠ ಪ್ರವಚನ ನಡೆಯುತ್ತಿತ್ತು. ಸ್ವಂತ ಕಟ್ಟಡ ಗರಗಂದೂರುವಿನಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿನ ಕ್ರೀಡಾ ಹಾಗೂ ಯುವಜನ ಸೇವಾ ಇಲಾಖೆಯ ಸಚಿವರೂ, ಹಾಲಿ ಶಾಸಕ ಅಪ್ಪಚ್ಚು ರಂಜನ್ ಪರಿಶ್ರಮದಿಂದ ನಿರ್ಮಾಣವಾಯಿತು.

ಕಳೆದ 6 ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಇಲ್ಲಿನ ಎಲ್ಲ ಉಪನ್ಯಾಸಕರನ್ನು ಸರಕಾರ ಈ ಸಾಲಿನಲ್ಲಿ ಕರ್ತವ್ಯದಿಂದ ತೆಗೆದು ಹಾಕಿರುವುದರಿಂದ ಪಿಸಿಎಂಬಿ ಹಾಗೂ ಪಿಸಿಎಂಸಿ ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ.

 

 

ಸರಕಾರ ದಿಢೀರನೆ ಎಲ್ಲ ಗುತ್ತಿಗೆ ಆಧಾರದ ಉಪನ್ಯಾಸಕರನ್ನು ಕರ್ತವ್ಯದಿಂದ ತೆಗೆದುಹಾಕಿದ್ದು, ಅತಿಥಿ ಉಪನ್ಯಾಸಕರ ನೇಮಕಕ್ಕೆ ಮುಂದಾಗಿದೆ. ಆದರೆ ಕನಿಷ್ಠ ಸಂಬಳ ಅತಿಥಿ ಉಪನ್ಯಾಸಕರಿಗೆ ನೀಡುವುದರಿಂದ ಅತಿಥಿ ಉಪನ್ಯಾಸಕರು ಬರುತ್ತಿಲ್ಲ. ಈ ಹಿಂದೆ ಇದ್ದ ಉಪನ್ಯಾಸಕರು ಉತ್ತಮವಾಗಿ ಪಾಠ ಪ್ರವಚನ ಮಾಡುತ್ತಿದ್ದುದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದು ಈ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ.ಹರೀಶ್ ತಿಳಿಸಿದರು.

 ಈಗ ಯಾವುದೇ ವಿಷಯಗಳಿಗೆ ಉಪನ್ಯಾಸಕರು ಇಲ್ಲದ ಕಾರಣ ವಿದ್ಯಾರ್ಜನೆ ಮಾಡಬೇಕಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಸ್ವಚ್ಛತೆಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.

 

 

 

 

ಪ್ರಸ್ತುತ ದ್ವಿತೀಯ ಪಿಯುಸಿಯಲ್ಲಿ 70 ಮಂದಿ ವಿದ್ಯಾರ್ಥಿಗಳು ಇದ್ದು ಎಲ್ಲ ಕಾಲೇಜುಗಳಲ್ಲಿ ತರಗತಿಗಳು ಪ್ರಾರಂಭಗೊಂಡರೂ ಇಲ್ಲಿ ಉಪನ್ಯಾಸಕರಿಲ್ಲದೆ ಪಾಠ ಪ್ರವಚನಗಳುನಡೆಯದ ಕಾರಣ ವ್ಯಾಸಂಗ ಮಾಡುತ್ತಿದ್ದ ಕೆಲವು ವಿದ್ಯಾರ್ಥಿಗಳು ಬೇಸರಗೊಂಡು ತಮ್ಮ ವರ್ಗಾವಣೆ ಪತ್ರವನ್ನು ತೆಗೆದುಕೊಂಡು ಹೋದ ಘಟನೆಯು ನಡೆದಿದೆ. ಪ್ರಥಮ ಪಿಯುಸಿಗೆ ಜೂನ್ 13ರವರೆಗೆ ಪ್ರವೇಶಾತಿಗೆ ಅವಕಾಶವಿದೆ. ಅದರಲ್ಲಿ 40 ಬಾಲಕಿ ಮತ್ತು 40 ಮಂದಿ ಬಾಲಕರಿಗೆ ಈ ಕಾಲೇಜಿನಲ್ಲಿ ಪ್ರವೇಶದ ಅವಕಾಶವಿದೆ. ಇನ್ನು ಕೆಲವೇ ದಿನಗಳಲ್ಲಿ ಉಪನ್ಯಾಸಕರ ಭರ್ತಿ ಆಗುವ ಸಾಧ್ಯತೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲೆ ಕೆ.ಡಿ.ನೀತಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News