ಸಾಗರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಕಾಗೋಡು
ಸಾಗರ, ಜೂ.14: ಸಾಗರದಿಂದ ಕ್ಷೇತ್ರದ ಅಭಿವೃದ್ಧಿಗೆ ಸಿಗಬಹುದಾದ ಎಲ್ಲ ಅನುದಾನಗಳನ್ನು ತಂದು ಅರ್ಹರಿಗೆ ತಲುಪಿಸಲು ಪೂರ್ಣ ಪ್ರಯತ್ನ ನಡೆಸುವುದಾಗಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪತಿಳಿಸಿದರು. ಇಲ್ಲಿನ ರಾಮನಗರದಲ್ಲಿ ಮಂಗಳವಾರ ನಗರಸಭೆ ವತಿಯಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಕಾರದೊಂದಿಗೆ 1.50 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸಾಗರ ನಗರ ವ್ಯಾಪ್ತಿಯಲ್ಲಿ 14 ಕೊಳಚೆ ಪ್ರದೇಶವನ್ನು ಗುರುತಿಸಲಾಗಿತ್ತು. ಕೆಲವು ಪ್ರದೇಶಗಳು ಅಭಿವೃದ್ಧಿ ಹೊಂದಿರುವುದರಿಂದ ಈಗ 9ಕ್ಕೆ ಇಳಿದಿದೆ. ಈ ಎಲ್ಲ ಪ್ರದೇಶಗಳ ಸಂಪೂರ್ಣ ಅಭಿವೃದ್ಧಿಗೆ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಕಾಲಕಾಲಕ್ಕೆ ಅನುದಾನ ಬಿಡುಗಡೆ ಯಾಗುತ್ತಿರುವುದು ಸಂತಸದ ಸಂಗತಿ. ರಾಮನಗರ ಕಾಲನಿಯನ್ನು ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ಚರಂಡಿ ಕಾಮಗಾರಿಗೆ 1.50 ಕೋಟಿ ರೂ. ಬಿಡುಗಡೆಯಾಗಿದ್ದು, ಹೆಚ್ಚಿನ ಅನುದಾನ ನೀಡುವ ಭರವಸೆ ಮಂಡಳಿಯಿಂದ ದೊರೆತಿದೆ ಎಂದರು. ಜಲ್ಲಿ ಜಂಬಗಾರು ಬಡಾವಣೆ ಅಭಿವೃದ್ಧಿಗೆ 50 ಲಕ್ಷ ರೂ., 2014-15ನೆ ಸಾಲಿನಲ್ಲಿ ಶ್ರೀಧರ ನಗರ ಆಶ್ರಯ ಬಡಾವಣೆ ಅಭಿವೃದ್ಧಿಗೆ 40 ಲಕ್ಷ ರೂ., 2015-16ನೆ ಸಾಲಿನಲ್ಲಿ ಅಣಲೆಕೊಪ್ಪ ಸ.ನಂ. 7ಕ್ಕೆ 20 ಲಕ್ಷ ರೂ., ಶ್ರೀಧರ ನಗರ ಆಶ್ರಯ ಬಡಾವಣೆಗೆ 20 ಲಕ್ಷ ರೂ.,ಜಂಬಗಾರು ಬಡಾವಣೆಗೆ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿ, ಕಾಮಗಾರಿ ಮುಗಿದಿದೆ ಎಂದರು. ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಝ್ ಯೋಜನೆಯ ನಮ್ಮ ಸೂರು ಯೋಜನೆಯಡಿ ನಗರ ವ್ಯಾಪ್ತಿಗೆ 1,588 ಮನೆಗಳು ಮಂಜೂರಾಗಿವೆ. ಇದಕ್ಕೆ ಸುಮಾರು 87.45 ಲಕ್ಷ ರೂ. ವೆಚ್ಚವಾಗಲಿದೆ. ಇದನ್ನು ಕೇಂದ್ರ ಸರಕಾರ ಭರಿಸಲಿದ್ದು, ಫಲಾನುಭವಿಗಳು ಸ್ವಲ್ಪಹಣವನ್ನು ಪಾವತಿಸಬೇಕಾಗುತ್ತವೆ. ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆ ಸದ್ಯದಲ್ಲಿ ನಡೆಯಲಿದೆ. ಯೋಜನೆ ಕುರಿತು ರಾಜ್ಯ ಸರಕಾರದ ಒಪ್ಪಿಗೆ ಸಿಕ್ಕ ತಕ್ಷಣ ಮನೆ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದರು. ರಾಮನಗರದಲ್ಲಿ ಕೈಗಾರಿಕಾ ವಸಾಹತು ಪ್ರದೇಶಕ್ಕಾಗಿ 18 ಎಕರೆ ಪ್ರದೇಶಗುರುತಿಸಲಾಗಿದೆ. ಜೊತೆಗೆ 10 ಎಕರೆ ಪ್ರದೇಶದಲ್ಲಿ ಐಟಿಐ ಕಾಲೇಜು ತೆರೆಯಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಆರ್. ಗಣಾಧೀಶ್ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ನಗರ ವ್ಯಾಪ್ತಿಯಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ 2.90 ಕೋಟಿ ರೂ. ಬಿಡುಗಡೆಯಾಗಿದೆ. ಜೊತೆಗೆ 1,588 ಮನೆಗಳಿಗೆ ಮಂಜೂರಾತಿ ದೊರೆತಿದೆ ಎಂದರು.
ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷ ಐ.ಎನ್. ಸುರೇಶಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಾಥ್, ಸದಸ್ಯೆ ವೀಣಾ, ಕೊ.ಅ.ಮಂ.ಕಾರ್ಯಪಾಲಕ ಅಭಿಯಂತರ ಕಪನಿ ಗೌಡರು ಮತ್ತಿತರರಿದ್ದರು.