ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಕ್ಷಮೆಯಾಚನೆಗೆ ಆಗ್ರಹಿಸಿ ಧರಣಿ
ಶಿವಮೊಗ್ಗ, ಜೂ. 14: ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ದಲಿತ ನಾಯಕರಲ್ಲ. ಸಂವಿಧಾನ ರಚನೆಯಲ್ಲಿ ಅವರ ಪಾತ್ರವಿಲ್ಲ ಎಂದು ಹೇಳಿಕೆ ನೀಡಿರುವ ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಅಧ್ಯಕ್ಷ ರಾಮ್‌ಬಹದ್ದೂರ್ ರಾಯ್‌ರವರು ತಕ್ಷಣವೇ ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಾನ್ ಚೇತನ, ಸಾಮಾಜಿಕ ಪರಿವರ್ತನೆಯ ಹರಿಕಾರ, ಸಮಾಜ ಸುಧಾರಕ ಅಂಬೇಡ್ಕರ್‌ರವರು ವಿಶ್ವ ಕಂಡ ಅಪರೂಪದ ಮೇಧಾವಿಗಳಲ್ಲೋರ್ವರಾಗಿದ್ದು, ಜ್ಞಾನದ ಸಂಕೇತವಾಗಿದ್ದಾರೆ.
ಅಂಬೇಡ್ಕರ್‌ರವರು ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿ, ವಿಶ್ವದ ಎಲ್ಲ ದೇಶಗಳ ಸಂವಿಧಾನ ಅಧ್ಯಯನ ಮಾಡಿದ್ದಾರೆ. ತಾವು ಪಡೆದ ಪಾಂಡಿತ್ಯವನ್ನೆಲ್ಲ ಸಂವಿಧಾನ ರಚನೆಯಲ್ಲಿ ಧಾರೆಯೆರೆದಿದ್ದಾರೆ. ಕರಡು ಸಮಿತಿಯ ಇತರ ಸದಸ್ಯರು ಹಲವಾರು ನೆಪವೊಡ್ಡಿ ಸಂವಿಧಾನ ರಚನೆಯಲ್ಲಿ ಪಾಲ್ಗೊಳ್ಳದಿದ್ದಾಗ, ದೃತಿಗೆಡದೆ ಏಕಾಂಕಿಯಾಗಿ ಸಂವಿಧಾನ ರಚಿಸಿ ದೇಶಕ್ಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಇತ್ತೀಚೆಗೆ ಐಜಿಎನ್‌ಸಿಎ ಅಧ್ಯಕ್ಷ ರಾಮ್‌ಬಹದ್ದೂರ್ ನಿಯತಕಾಲಿ ಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು ಎಂಬುದೆಲ್ಲ ಕಲ್ಪನೆ. ಅಂಬೇಡ್ಕರ್ ದಲಿತರ ಅತ್ಯುನ್ನತ ನಾಯಕ ಎಂಬುದು ಕಲ್ಪನೆ ಎಂಬ ಹೇಳಿಕೆ ನೀಡಿದ್ದು, ಕೂಡಲೇ ಐಜಿಎನ್‌ಸಿಎ ಅಧ್ಯಕ್ಷ ರಾಮ್‌ಬಹದ್ದೂರ್ ರಾಯ್‌ಕ್ಷಮೆಯಾಚಿಸಿ, ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾ ದ ಭದ್ರಾವತಿ ಸತ್ಯ, ಚಿನ್ನಯ್ಯ, ನರಸಿಂಹ ಶೆಟ್ಟಿ, ರಾಜ್‌ಕುಮಾರ್ ಮತ್ತಿತರರಿದ್ದರು.