ಪಕ್ಷ ವಿರೋಧಿಗಳಿಗೆ ತಕ್ಕ ಪಾಠ: ಮಧು ಬಂಗಾರಪ್ಪ
ಸೊರಬ,ಜೂ.14: ಪಕ್ಷದ ಚೌಕಟ್ಟಿನಲ್ಲಿದ್ದುಕೊಂಡು ಪಕ್ಷ ವಿರೋಧಿ (ಅಡ್ಡ ಮತದಾನ) ಮಾಡಿದ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಮಧು ಬಂಗಾರಪ್ಪಹೇಳಿದರು.
ಮಂಗಳವಾರ ತಾಲೂಕಿನ ಕೊಡಕಣಿ ಗ್ರಾಪಂ ಸದಸ್ಯ ಚಿನ್ನಪ್ಪ ಅವರ ನಿವಾಸದಲ್ಲಿ, ಅವರನ್ನು ಜೆಡಿಎಸ್‌ಪಕ್ಷಕ್ಕೆ ಬರ ಮಾಡಿಕೊಂಡು ನಂತರ ಅವರುಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಡಿಎಸ್ ಪಕ್ಷದಿಂದ ಅಮಾನತುಗೊಂಡ 8 ಶಾಸಕರ ಬಗ್ಗೆ ಸಮರ್ಥಿಸಿಕೊಂಡ ಅವರು ಒಂದು ಪಕ್ಷದಲ್ಲಿದ್ದುಕೊಂಡು ಚುನಾವಣೆ ಸಂದರ್ಭಗಳಲ್ಲಿ ಬೇರೆ ಪಕ್ಷಕ್ಕೆ ಬೆಂಬಲ ನೀಡುವವರಿಗೆ ಇದೊಂದು ಎಚ್ಚರಿಕೆಯ ಸಂದೇಶ ರವಾನಿಸಿದಂತಾಗಿದೆ. ಶಿಕ್ಷಕರ ಮತ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಜಯ ಗಳಿಸುವ ಮೂಲಕ ಶಿಕ್ಷಣ ಕ್ಷೇತ್ರದ ಬುದ್ಧ್ದಿವಂತ ಮತದಾರರು ಜೆಡಿಎಸ್ ಪಕ್ಷ ಜೀವಂತವಾಗಿದೆ ಎಂದು ತೋರಿಸಿಕೊಟ್ಟಿದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು.
ಜೆಡಿಎಸ್ ಒಂದು ಜಾತ್ಯತೀತ ಪಕ್ಷವಾಗಿದ್ದು, ಜಾತಿ ಭೇದವಿಲ್ಲದೇ ಎಲ್ಲಾ ಸಮುದಾಯದಲ್ಲಿರುವ ಜಾತ್ಯತೀತ ಮನೋಭಾವ ಹಾಗೂ ಜನರೊಂದಿಗೆ ಇರುವ ಉತ್ತಮ ಬಾಂಧವ್ಯವನ್ನು ಹೊಂದಿರುವ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಒಮ್ಮತದಿಂದ ತಾಲೂಕಿನ 19 ತಾಪಂ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು. ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ತಾಲೂಕಿನ ಜನತೆಯೊಂದಿಗಿರುವ ಉತ್ತಮ ಸಂಪರ್ಕದಿಂದಾಗಿ ಮತದಾರರು ತಮ್ಮ ಪಕ್ಷದ ಎಲ್ಲಾ ತಾಪಂ ಕ್ಷೇತ್ರಗಳಲ್ಲೂ ಜಯಗಳಿಸಿ ಕೊಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದಭರ್ದಲ್ಲಿ ಕೊಡಕಣಿ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಸದಸ್ಯ ಗೂಳಿ ಹೂವಪ್ಪ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ ಮುಖಂಡರಾದ ಎಂ.ಡಿ. ಶೇಖರ್, ಉಳವಿ ಬಂಗಾರಪ್ಪ, ಕುಶಾಲ, ಕುಮ್ಮೂರು ರಂಗಪ್ಪ, ಬಸವಣ್ಯಪ್ಪ, ಸುಧೀರ್ ಜೊತಾಡಿ, ಶಿವಪ್ಪ, ವೈ.ಡಿ. ನಾಗರಾಜ, ಮತ್ತಿತರರು ಉಪಸ್ಥಿತರಿದ್ದರು.