×
Ad

ಖಾರ್ವಿ ಸಮಾಜದಿಂದ ಉಳಿತಾಯ ಹಣದಲ್ಲಿ ಸಮಾಜಸೇವೆ : ಜಿ.ಕೆ.ಭೈರಪ್ಪ

Update: 2016-06-14 23:32 IST

ಸಾಗರ, ಜೂ.14: ಕೊಂಕಣಿ ಖಾರ್ವಿ ಸಮಾಜ ಬಾಂಧವರು ಶ್ರಮಿಕಜೀವಿಗಳಾಗಿದ್ದು, ದಿನದ ಬಹುತೇಕ ಸಮಯವನ್ನು ಕಾಯಕದಲ್ಲಿ ಕಳೆದು, ತಮ್ಮ ಉಳಿತಾಯದ ಹಣವನ್ನು ಸಮಾಜ ಕಾರ್ಯಕ್ಕೆ ವಿನಿಯೋಗಿಸುತ್ತಿರುವುದು ಶ್ಲಾಘನೀಯ ಎಂದು ನಗರಸಭೆ ಸದಸ್ಯ ಜಿ.ಕೆ.ಭೈರಪ್ಪ ಹೇಳಿದರು. ಇಲ್ಲಿನ ಕೊಂಕಣಿ ಖಾರ್ವಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಕೊಂಕಣಿ ಖಾರ್ವಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಿಂದುಳಿದ ಸಮಾಜಗಳು ಸಂಘಟಿತರಾಗಬೇಕು. ಖಾರ್ವಿ ಸಮಾಜಕ್ಕೆ ಸರಕಾರದ ಅನೇಕ ಸೌಲಭ್ಯಗಳು ಸಿಗುತ್ತಿದ್ದು, ಅವುಗಳ ಮಾಹಿತಿ ಪಡೆದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಖಾರ್ವಿ ಸಮಾಜ ಆರ್ಥಿಕವಾಗಿ ತೀರ ಹಿಂದುಳಿದಿದೆ. ಮರಗೆಲಸದ ಜತೆಗೆ ವಿವಿಧ ಕೂಲಿಕಾರ್ಮಿಕ ವೃತ್ತಿಯನ್ನು ನಿರ್ವಹಿಸುತ್ತಿರುವ ಸಮಾಜ ಮುಖ್ಯವಾಹಿನಿಗೆ ಬರಲು ಇಂತಹ ಜನಪರ ಕಾರ್ಯಕ್ರಮಗಳು ಪೂರಕವಾಗಿವೆೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಂಕಣಿ ಖಾರ್ವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಮಲಾಕರ ಎನ್.ಖಾರ್ವಿ ಮಾತನಾಡಿ, ನಮ್ಮ ಸಮಾಜದಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರನೆ ವರ್ಷದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜತೆಗೆ ಸಾಧಕರನ್ನು ಕಾಲಕಾಲಕ್ಕೆ ಸನ್ಮಾನಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು. ವೇದಿಕೆಯಲ್ಲಿ ನಗರಸಭೆ ಸದಸ್ಯ ಕೆ.ಸಿದ್ದಪ್ಪ, ನಿವೃತ್ತ ಮುಖ್ಯ ಶಿಕ್ಷಕಿ ನಾಗರತ್ನ, ಫಿಲೋಮಿನಾ ರೋಡ್ರಿಗಸ್, ತುಳಸಿದಾಸ್ ಎಚ್.ಖಾರ್ವಿ, ವಸಂತ ಶೇಟ್, ನಾಗರಾಜ ಎಸ್. ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಸೌಮ್ಯಾ ಮತ್ತು ಕಾವ್ಯಾ ಪ್ರಾರ್ಥಿಸಿದರು. ಚಂದ್ರಶೇಖರ್ ಸ್ವಾಗತಿಸಿ, ಲೋಕೇಶ್ ವಂದಿಸಿದರು. ವೆಂಕಟೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News