ಹಿರಿಯ ನಾಗರಿಕರ ಆರೆಕೆಗೆ ಕಾಳಜಿ ವಹಿಸಿ: ಎಡಿಸಿ
ಚಿಕ್ಕಮಗಳೂರು, ಜೂ.14: ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸಿ ಅವರ ಆರೈಕೆ ಮಾಡುವ ಉದ್ದೇಶದಿಂದ ಯೋಗಕ್ಷೇಮ ಕೇಂದ್ರವನ್ನು ತೆರೆಯಲಾಗಿದ್ದು, ಹಿರಿಯ ನಾಗರಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಎಂದು ಕರೆ ನೀಡಿದರು.
ಅವರು ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಗರದ ಚರ್ಚ್ ರಸ್ತೆಯಲ್ಲಿ ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರು ವಯೋವೃದ್ಧರಾಗಿದ್ದರೂ ಮಾನಸಿಕವಾಗಿ ಅವರು ಬಹಳಷ್ಟು ಪ್ರಬುದ್ಧರಾಗಿದ್ದರೂ, ಅವರ ಮಾರ್ಗದರ್ಶನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿರುತ್ತದೆ ಎಂದ ಅವರುಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಆರೈಕೆಯನ್ನು ಹೆಚ್ಚಿನ ಮುತುವರ್ಜಿಯಿಂದ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆಧುನಿಕತೆಯ ಪ್ರಭಾವದಿಂದಾಗಿ ಇಂದಿನ ಯುವ ಜನತೆ ಹೆತ್ತವರನ್ನು ಕಡೆಗಣಿಸುತ್ತಿದ್ದು, ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಠ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.
ನಿವೃತ್ತ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಮಾತನಾಡಿ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಸರಕಾರ ಈ ಕೇಂದ್ರವನ್ನು ತೆರೆದಿದೆ ಎಂದರು.
ವಾರ್ತಾ ಅಧಿಕಾರಿ ಬಿ.ಮಂಜುನಾಥ್ ಮಾತನಾಡಿ, ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಸರಕಾರಗಳು ಹಲವಾರು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಿದ್ದು, ಹಿರಿಯ ನಾಗರಿಕರು ಸಂಬಂಧಪಟ್ಟ ಇಲಾಖೆಗೆ ತೆರಳಿ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬೇಕು ಎಂದು ಮನವಿ ಮಾಡಿದರು.
ಸೊಸೈಟಿ ಫಾರ್ ಪೀಪಲ್ಸ್ ಇಂಟೀಗ್ರೇಟೆಡ್ ಡೆವಲಪ್‌ಮೆಂಟ್ ಸಂಸ್ಥೆಯ ಕಾರ್ಯದರ್ಶಿ ಕೆ. ಪ್ರಕಾಶ್, ನ್ಯಾಯವಾದಿ ಸಿ.ಕೆ.ಲೋಕೇಶ್‌ಗೌಡ, ಕೆನರಾ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಮಾಲತೇಶ್, ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರಿಯಾಜ್ ಅಹ್ಮದ್ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಗಂಗಾಧರ್ ಪ್ರಾರ್ಥಿಸಿದರು. ಪಾಲಕರ ಹಾಗೂ ಪೋಷಕರ ಕಾಯ್ದೆಯ ಸದಸ್ಯ ಹೆಚ್.ಎಸ್.ಗಂಗಾಧರ್ ಸ್ವಾಗತಿಸಿದರು. ಡಿಡಿಆರ್‌ಸಿ ನೋಡಲ್ ಅಧಿಕಾರಿ ದರ್ಶನ್ ವಂದಿಸಿದರು.