×
Ad

ಪರಿಸರ ಉಳಿಸಿ, ಬೆಳೆಸುವ ಕಾರ್ಯ ನಡೆಯಲಿ: ಭೋಜರಾಜ

Update: 2016-06-14 23:38 IST

ಮೂಡಿಗೆರೆ, ಜೂ.14: ಪರಿಸರ ಉಳಿಸಿ, ಬೆಳೆಸುವ ಕಾರ್ಯ ನಡೆಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳೂ ಪ್ರಾಥಮಿಕ ಹಂತದಿಂದಲೇ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಮೂಡಿಗೆರೆ ಉಪ ಅರಣ್ಯಾಧಿಕಾರಿ ಭೋಜರಾಜ್ ಹೇಳಿದರು.

ಅವರು ಬಣಕಲ್ ಪಟ್ಟಣದ ನಝರತ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಶುಚಿತ್ವದ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು. ತಮ್ಮ, ತಮ್ಮ ಮನೆಯಲ್ಲಿ ಒಂದೊಂದು ಗಿಡವನ್ನು ನೆಡುವ ಕಾರ್ಯ ನಡೆಯಬೇಕಿದೆ. ಪರಿಸರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು.

ನಝ್ರತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಬ್ಲಾಂಚ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಮಾಲಿನ್ಯದಿಂದ ಹತ್ತು ಹಲವು ಸಮಸ್ಯೆಗಳನ್ನು ನಾವು ಎದುರಿಸುವಂತಾಗುತ್ತಿದೆ. ಮಲೆನಾಡಿನ ಹಚ್ಚ ಹಸಿರಿನ ಪರಿಸರ ಬೇರೆಲ್ಲೂ ಕಾಣಲು ಸಿಗಲಾರದು. ನಗರಗಳಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಪರಿಸರ ಮಾಲಿನ್ಯದ ಪರಿಣಾಮ ರೋಗ ರುಜಿನಗಳ ಆಗರವಾಗುತ್ತಿವೆ. ನಮ್ಮ ಸುತ್ತಮುತ್ತ ಪರಿಸರವನ್ನು ಕಾಪಾಡುವುದರಿಂದ ನಮ್ಮ ಬದುಕು ಹಸನಾಗುತ್ತದೆ ಎಂದು ನುಡಿದರು.

ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಮಕ್ಕಳು ಪರಿಸರ ಸಂರಕ್ಷಣೆ ಬಗ್ಗೆ ಕಿರು ನಾಟಕ ಮತ್ತು ಪರಿಸರ ಕುರಿತು ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಮೂಡಿಗೆರೆ ಉಪ ವಲಯ ಅರಣ್ಯಾಧಿಕಾರಿ ಭೋಜರಾಜ್‌ಅವರು ಮಕ್ಕಳಿಗೆ ಗಿಡ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಾರತೀ ಬೈಲ್ ಅರಣ್ಯಾಧಿಕಾರಿ ಶಿವಕುಮಾರ್, ಸಿಸ್ಟರ್ ದೀಪ್ತಿ, ಶಿಕ್ಷಕ ವೃಂದ ಹಾಗೂ ಶಾಲಾ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ರೇಖಾ ನಿರೂಪಿಸಿದರು. ವಿದ್ಯಾರ್ಥಿಗಳಾದ ಚಿರಾಗ್ ಮತ್ತು ಮನವಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News