×
Ad

ಶಾಸಕರ ಕಚೇರಿ ಮುಂಭಾಗದಲ್ಲಿ ಧರಣಿ

Update: 2016-06-15 23:18 IST

ಶಿವಮೊಗ್ಗ, ಜೂ.15: ಶಿವಮೊಗ್ಗ ನಗರದಲ್ಲಿ ಸರಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಹಾಗೂ ಈ ಕುರಿತಂತೆ ಶಾಸಕರು ನೀಡಿದ್ದ್ದ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿ, ಅಣ್ಣಾ ಹಜಾರೆ ಹೋರಾಟ ಸಮಿತಿಯು ಬುಧವಾರ ನಗರದ ನೆಹರೂ ರಸ್ತೆಯಲ್ಲಿರುವ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕಚೇರಿ ಎದುರು ಧರಣಿ ನಡೆಸಿತು. ಹಿಂದಿನ ಕೇಂದ್ರ ಯುಪಿಎ ಸರಕಾರದ ಅವಧಿಯಲ್ಲಿ ಜೆನ್ ನರ್ಮ್ ಯೋಜನೆಯಡಿ ನಗರದಲ್ಲಿ ಸರಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಅಗತ್ಯ ಅನುದಾನ ಕೂಡ ಬಿಡುಗಡೆ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಬಸ್‌ಗಳ ಸಂಚಾರ ಆರಂಭವಾಗಿಲ್ಲ. ಬರಿ ಹುಸಿ ಭರವಸೆ ನೀಡಲಾಗುತ್ತಿದೆ. ಯಾವಾಗ ಬಸ್ ಸಂಚಾರ ಆರಂಭವಾಗಲಿದೆ ಎಂಬುವುದರ ಬಗ್ಗೆ ಜಿಲ್ಲಾಡಳಿತ ಹಾಗೂ ಶಾಸಕರು ನಾಗರಿಕರಿಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಧರಣಿ ನಿರತರು ದೂರಿದ್ದಾರೆ. 65 ಸರಕಾರಿ ಸಿಟಿ ಬಸ್‌ಗಳ ಖರೀದಿಗೆ, ಪ್ರತ್ಯೇಕ ಬಸ್ ಟರ್ಮಿನಲ್, ವರ್ಕ್‌ಶಾಪ್, ಡಿಪೋ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದೆ. ಪ್ರಥಮ ಕಂತಿನಲ್ಲಿ ಬಸ್ ಖರೀದಿಗೆ 7.54 ಕೋಟಿ ರೂ. ಮತ್ತು ಡಿಪೋ, ವರ್ಕ್‌ಶಾಪ್ ಕಾಮಗಾರಿಗೆ 0.47 ಕೋಟಿ ರೂ. ನೀಡಿದೆ ಎಂದು ಧರಣಿ ನಿರತರು ತಿಳಿಸಿದರು. ಈ ಬಸ್ ಸಂಚರಿಸಿದರೆ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಬಸ್ ಪಾಸ್ ಸೌಲಭ್ಯ ಲಭ್ಯವಾಗುತ್ತದೆ. ನಗರದ ಎಲ್ಲ ಬಡಾವಣೆಗಳಿಗೂ ನಗರ ಸಾರಿಗೆ ಸಂಪರ್ಕ ಸಿಗುತ್ತಿತ್ತು. ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತಿತ್ತು ಎಂದು ಧರಣಿನಿರತರು ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ಬಸ್ ಸಂಚಾರ ಆರಂಭವಾಗಿಲ್ಲ. ಈ ಯೋಜನೆ ಜೀವಂತವಾಗಿದೆಯೇ ಎನ್ನುವ ಅನುಮಾನ ಉಂಟಾಗಿದೆ. ಹಲವು ನಗರಗಳಲ್ಲಿ ಈ ಯೋಜನೆ ಜಾರಿಯಾಗಿ ಬಸ್ ಓಡಾಟ ಆರಂಭವಾಗಿದೆ. ಆದರೆ ಶಿವಮೊಗ್ಗದಲ್ಲಿ ಆರಂಭವಾಗದಿರುವುದನ್ನು ಸಮಿತಿ ಖಂಡಿಸುತ್ತದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು. ಧರಣಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಚಿಕ್ಕಸ್ವಾಮಿ, ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಶೋಕ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News