ಮಳೆಗಾಲದಲ್ಲಿ ಕೆಸರು ಗುಂಡಿಯಾಗಿ ಪರಿಣಮಿಸುವ ಪ್ರತಿಷ್ಠಿತ ಬಡಾವಣೆಯ ರಸ್ತೆಗಳು!
ಶಿವಮೊಗ್ಗ, ಜೂ.15: ನಗರದ ಸವಳಂಗ ರಸ್ತೆಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿನ ರಸ್ತೆಗಳು ಡಾಂಬರೀಕರಣಗೊಳ್ಳದ ಹಿನ್ನೆಲೆಯಲ್ಲಿ, ಮಳೆಗಾಲದ ವೇಳೆ ಅಕ್ಷರಶಃ ಕೆಸರು ಗುಂಡಿಯಾಗಿ ಮಾರ್ಪಾಡಾಗಿ, ನಾಗರಿಕರು ಓಡಾಡಲು ಹರಸಾಹಸ ಪಡುವಂತಾಗಿದೆ. ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಮಹಾನಗರ ಪಾಲಿಕೆ ಆಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸ್ಥಳೀಯರೊಬ್ಬರು ಈ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಸಚಿತ್ರ ಮಾಹಿತಿ ಹಾಕಿದ್ದು, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸ್ಥಳಿಯಾಡಳಿತಕ್ಕೆ ಒತ್ತಾಯಿಸಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆಯು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾಗಿದೆ. ಮುಖ್ಯ ರಸ್ತೆಗಳು ಡಾಂಬರೀಕರಣಗೊಂಡಿವೆ. ಆದರೆ ಬಡಾವಣೆಯ ಹಲವು ಅಡ್ಡ ರಸ್ತೆಗಳು ಇಲ್ಲಿಯವರೆಗೂ ಡಾಂಬರೀಕರಣಗೊಂಡಿಲ್ಲ. ಗುಂಡಿ-ಗೊಟರುಗಳು ಬಿದ್ದಿವೆ. ಮಳೆಗಾಲದ ವೇಳೆ ಮಳೆ ನೀರು ನಿಂತುಕೊಂಡು ಸಾರ್ವಜನಿಕರು, ವಾಹನ ಸಂಚಾರ ಅಸಾಧ್ಯವಾಗಿ ಪರಿಣಮಿಸುತ್ತಿದೆ ಎಂದು ನಾಗರಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಿಗುಟು ಮಣ್ಣಿನ ರಸ್ತೆಗಳಾಗಿರುವುದರಿಂದ ಕೊಂಚ ಮಳೆಯಾದರೂ ಓಡಾಡಲು ಸಾಧ್ಯವಾಗುವುದಿಲ್ಲ. ಈ ಕುರಿತಂತೆ ವಾರ್ಡ್ ಕಾರ್ಪೋರೇಟರ್‌ರವರ ಗಮನಕ್ಕೆ ತರಲಾಗಿದೆ. ಅವರು ತಮ್ಮ ವಾರ್ಡ್ ವ್ಯಾಪ್ತಿ ವಿಶಾಲವಾಗಿದ್ದು, ಸೀಮಿತ ಅನುದಾನದಲ್ಲಿ ಎಲ್ಲೆಡೆ ಕೆಲಸ ಮಾಡಲು ಆಗುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂದು ನಾಗರಿಕರು ತಿಳಿಸಿದ್ದಾರೆ. ಮೂಲಸೌಕರ್ಯ ಕಲ್ಪಿಸುವುದು ಪಾಲಿಕೆ ಆಡಳಿತದ ಜವಾಬ್ದಾರಿಯಾಗಿದೆ. ಇದಕ್ಕಾಗಿಯೇ ನಾಗರಿಕರಿಂದ ತೆರಿಗೆ ಕೂಡ ವಸೂಲಿ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಬಡಾವಣೆಗೆ ಖುದ್ದು ಭೆೇಟಿಯಿತ್ತು ರಸ್ತೆಗಳ ಅವ್ಯವಸ್ಥೆ ಸರಿಪಡಿಸಬೇಕು. ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಕ್ರಮಕೈಗೊಳ್ಳಬೇಕು ಎಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.