×
Ad

ದಲಿತರು ಸಂಚರಿಸುವ ರಸ್ತೆಗೆ ತಡೆ: ತೆರವಿಗೆ ಒತ್ತಾಯಿಸಿ ಧರಣಿ

Update: 2016-06-15 23:20 IST

ಚಿಕ್ಕಮಗಳೂರು, ಜೂ.15: ವಸ್ತಾರೆ ಹೋಬಳಿಗೆ ಸೇರಿದ ತಡಗಸೆ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರು ಹಾಗೂ ಶಾಲಾ ಮಕ್ಕಳಿಗೆ ರಸ್ತೆಯಲ್ಲಿ ಸಂಚರಿಸದಂತೆ ಅಡ್ಡಗಟ್ಟಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಡಿಎಸ್‌ಎಸ್ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ತಡಗಸೆ ಗ್ರಾಮದ ಶಾಲಾ ಮಕ್ಕಳಿಗೆ ಓಡಾಡಲು ರಸ್ತೆಯನ್ನು ತೆರವುಗೊಳಿಸಬೇಕು. ರಸ್ತೆಯನ್ನು ಮುಚ್ಚಿದ ಮೇಲ್ವರ್ಗದ ಜನರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ವಸ್ತಾರೆ ಹೋಬಳಿಯ ಕೆಳಗಣೆ ಗ್ರಾಮದ ಸ.ನಂ. 109ರಲ್ಲಿ 4ಎಕರೆ ಜಮೀನು ಹಿರಿಗಯ್ಯ ಹೆಸರಿನಲ್ಲಿ ಪಹಣಿ, ಹಕ್ಕುಪತ್ರ ರೆವಿನ್ಯೂ ನಕ್ಷೆಗಳು ಇದ್ದು, ಸರ್ವೆಗೆ ಆದೇಶವಾಗಿದ್ದರೂ, ಈ ಜಮೀನನ್ನು ಸರ್ವೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಸರ್ವೇ ನಡೆಸಿಕೊಟ್ಟಿಲ್ಲ. ತಕ್ಷಣವೇ ಈ ಬಗ್ಗೆ ಕ್ರಮ ಜರಗಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದ್ದಾರೆ.

ಆಲ್ದೂರು ಹೋಬಳಿ ಬಳಿಯ ತುಡುಕೂರು ಎಂಬಲ್ಲಿ ಪರಿಶಿಷ್ಟ ಜಾತಿಯ ಉದ್ದಯ್ಯ, ಮಂಜಯ್ಯ ಎಂಬವರ ಸ.ನಂ. 133ರಲ್ಲಿ ಎಕರೆ ಜಮೀನಿದ್ದು, ಸರ್ವೇಗೆ ಆದೇಶಿಸಲಾಗಿದ್ದರೂ ಅಧಿಕಾರಿಗಳು ಜಮೀನು ಸರ್ವೆ ನಡೆಸಲು ಬಂದಿಲ್ಲ ಎಂದಿರುವ ಧರಣಿ ನಿರತರು, ಗಡಬನಹಳ್ಳಿ ಪರಿಶಿಷ್ಟರ ಕಾಲನಿಯ ಪರಿಶಿಷ್ಟರ ಶವವನ್ನು ಹೂಳಲು ಸ್ಮಶಾನ ಇಲ್ಲದೆ ಬಹಳ ಸಮಸ್ಯೆ ಎದುರಾಗಿದೆ. ತಕ್ಷಣವೇ ಈ ಕುರಿತು ಸೂಕ್ತ ಕ್ರಮ ಅನುಸರಿಸಿ ಸ್ಮಶಾನ ಭೂಮಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

 ತಡಗಸೆ ಗ್ರಾಮದ ಪರಿಶಿಷ್ಟರ ಕಾಲನಿಯ ಸಿದ್ದಯ್ಯ ಎಂಬವರಿಗೆ ಸೇರಿದ ಸ.ನಂ. 44ರಲ್ಲಿ ದಲಿತರ ಭೂಮಿಯನ್ನು ಮೇಲ್ವರ್ಗದ ಜನರು ಒತ್ತುವರಿ ಮಾಡಿರುವುದನ್ನು ಪತ್ತೆ ಹಚ್ಚಿ ಅಪರಾಧಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕೆ.ಪಿ.ರಾಜರತ್ನಂ, ತಾಲೂಕು ಸಂಚಾಲಕ ಬಸವರಾಜ ಯಲಗುಡಿಗೆ, ಮುಖಂಡರಾದ ಚೆಡ್ಡಿ ನಾಗರಾಜು, ಟಿ.ಎಲ್.ಗಣೇಶ್, ದಿವಾಕರ್, ಐ.ಎಂ.ಪೂರ್ಣೇಶ್, ಪುಟ್ಟಲಕ್ಷ್ಮೀ, ಯೋಗೇಶ್, ಚಂದ್ರಶೇಖರ್, ಬಾಲಕೃಷ್ಣ, ಅಣ್ಣಪ್ಪ, ಈರಯ್ಯ, ಜಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News