×
Ad

ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳಿ್ಳ: ಶಾಸಕ ನಿಂಗಯ್ಯ

Update: 2016-06-15 23:24 IST

ಮೂಡಿಗೆರೆ, ಜೂ.15: ಸಾರ್ವಜನಿಕರ ಹಣದಿಂದ ಕೈಗೊಳ್ಳುವ ಸರಕಾರದ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬರಬೇಕಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸಲಹೆ ನೀಡಿದ್ದಾರೆ.

ಅವರು ತಾಲೂಕಿನ ಊರುಬಗೆ ಗ್ರಾಪಂ ಆವರಣದಲ್ಲಿ ನೂತನ ಗ್ರಾಪಂ ಪಂಚಾಯತ್ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸರಕಾರ ವಿವಿಧ ಯೋಜನೆಗಳಲ್ಲಿ ನೀಡುವ ಹಣವು, ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೀಡುವ ತೆರಿಗೆಯಿಂದ ಬರುವಂತಹುದು. ಅದು ಸದುಪಯೋಗವಾಗಬೇಕಾದರೆ ಉತ್ತಮ ಗುಣಮಟ್ಟದ ಕೆಲಸ ಕಾರ್ಯಗಳು ನಡೆಯಬೇಕು ಎಂದರು.

ಜನರ ಮೂಲಭೂತ ಆವಶ್ಯಕತೆಗಳಾದ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸಲು ಸರಕಾರಗಳು ಹೆಚ್ಚಿನ ಅನುದಾನ ನೀಡುತ್ತಿವೆ. ಆದರೆ ಕಳಪೆ ಕಾಮಗಾರಿಯಿಂದಾಗಿ ಇವು ಜನರಿಗೆ ಸರಿಯಾಗಿ ದೊರಕುತ್ತಿಲ್ಲ. ಈ ಬಗ್ಗೆ ಎಲ್ಲರೂ ಚಿಂತನೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಎಂಎಲ್ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಪ್ರಾಕೃತಿಕ ಸೌಂದರ್ಯದ ಗಣಿಯಾಗಿರುವ ಊರುಬಗೆ ಗ್ರಾಪಂ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಜನರು ತಮ್ಮ ಗ್ರಾಮದಲ್ಲಿ ನಡೆಯುವ ಸಾರ್ವಜನಿಕ ಕೆಲಸಗಳನ್ನು ಪರಿಶೀಲನೆ ನಡೆಸಿ ಸರಕಾರದೊಂದಿಗೆ ಸಹಭಾಗಿಯಾಗಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಕೆ.ಸಿ.ರತನ್, ಜಿಪಂ ಸದಸ್ಯೆ ಅಮಿತಾ, ತಾಪಂ ಸದಸ್ಯ ರಂಜನ್ ಅಜಿತ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಬೈರಾಪುರ ಲಕ್ಷ್ಮಣಗೌಡ ಮತ್ತಿತರರು ಉಪಸ್ಥಿತರಿದ್ದರು.

ಎಸ್.ಎ. ವಾಸುದೇವ್ ನಿರೂಪಿಸಿದರು. ಸತೀಶ್ ಊರುಬಗೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News