×
Ad

ಕಡೂರು: ತಾಪಂ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ತೀವ್ರ ಆಕ್ರೋಶ

Update: 2016-06-15 23:26 IST

ಕಡೂರು ಜೂ. 15: ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ, ಪಡಿತರ ಚೀಟಿಯ ಅವ್ಯವಹಾರ, ಖಾಸಗಿ ಶಾಲೆಗಳು ಆರ್‌ಟಿಇಗೆ ಮಾನ್ಯತೆ ನೀಡಿರುವ ಬಗ್ಗೆ ಹಾಗೂ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಾಪಂ ಸದಸ್ಯರು ವಾಗ್ದಾಳಿ ನಡೆಸಿದ ಘಟನೆ ತಾಪಂ ಸರ್ವ ಸದಸ್ಯರ ಸಭೆಯಲ್ಲಿ ನಡೆಯಿತು.

ಬುಧವಾರ ತಾಪಂ ಸಭಾಂಗಣ ದಲ್ಲಿ ಅಧ್ಯಕ್ಷೆ ರೇಣುಕಾಉಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆ ಪ್ರಾರಂಭ ವಾಗುತ್ತಿದ್ದಂತೆ, ಜೋಡಿಹೊಚಿಹಳ್ಳಿ ಕ್ಷೇತ್ರದ ಸದಸ್ಯ ಜೀಗಣೆಹಳ್ಳಿ ಮಂಜು ಆಹಾರ ಇಲಾಖೆಯ ಅವ್ಯವಹಾರದ ಬಗ್ಗೆ ಕಿಡಿಕಾರಿದರು. ನಿಯಮ ಬದ್ಧವಾಗಿ ಪಡಿತರ ಚೀಟಿಗೆ ಹೆಸರು ನೋಂದಾಯಿಸಿಕೊಂಡವರಿಗೆ ಪಡಿತರ ಚೀಟಿ ಸಿಗುತ್ತಿಲ್ಲ. ಆದರೆ ಒಂದು ಸಾವಿರ ರೂ. ನೀಡಿದರೆ ಕೂಡಲೇ ಪಡಿತರ ಚೀಟಿಯನ್ನು ವಿತರಿಸಲಾಗುತ್ತಿದೆ ಎಂದು ದೂರಿದರು.

ಇದಕ್ಕೆ ಆಹಾರ ಇಲಾಖೆಯ ನಿರೀಕ್ಷಕ ರಂಗನಾಥ್ ಉತ್ತರಿಸಿ, ಈ ರೀತಿಯ ಅವ್ಯವಹಾರ ನಡೆಯುತ್ತಿಲ್ಲ. ಇಂತಹ ಪ್ರಕರಣವನ್ನು ತಿಳಿಸಿದ್ದಲ್ಲಿ ಅಂತಹವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಪಡಿತರ ಚೀಟಿಗಳಿಗೆ ಆಧಾರ್‌ಕಾರ್ಡ್ ಜೋಡಣೆಯ ಕೆಲಸ ನಡೆಯುತ್ತಿ ರುವುದರಿಂದ ಹೊಸ ಪಡಿತರ ಚೀಟಿ ವಿತರಣೆ ವಿಳಂಬವಾಗುತ್ತಿದೆ. ಅನೇಕ ಕುಟುಂಬಗಳ ಪಡಿತರ ಚೀಟಿ ಹಲವು ಕಾರಣಗಳಿಂದ ರದ್ದಾಗಿವೆ. ಅಂತವರು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯ ಜೊತೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಪಡಿತರ ಚೀಟಿಗೆ ಆಧಾರ್‌ಕಾರ್ಡ್ ಜೋಡಣೆ ಕಡ್ಡಾಯ ವಾಗಿರುತ್ತದೆ ಎಂದು ತಿಳಿಸಿದರು.

ಸದಸ್ಯ ಆನಂದನಾಯ್ಕ ಮಾತನಾಡಿ, ಸಖರಾಯಪಟ್ಟಣ ದಲ್ಲಿ ಕುಡಿಯುವ ನೀರಿನ ಸಮಸ್ಯೆ 10ತಿಂಗಳಿನಿಂದ ಇದ್ದು, ಅದಕ್ಕೆ ಸೂಕ್ತ ಪರಿಹಾರ ಒದಗಿಸಿಲ್ಲ ಎಂದು ದೂರಿದರು. ಅದೇ ರೀತಿ ನಾಗರಾಳು, ಬ್ಯಾಲದಾಳುವಿನಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಆ ಭಾಗದ ಸದಸ್ಯರು ದೂರಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿ, ಈ ಬಾರಿಯ ಮುಂಗಾರು ಆಶಾದಾಯಕವಾಗಿದೆ. ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ಬಿತ್ತನೆ ಬೀಜಗಳನ್ನು ನಿಯಮಾನುಸಾರ ಪರಿಶೀಲನೆ ಮಾಡಿ ನಂತರವೇ ರೈತರಿಗೆ ನೀಡಲಾಗುತ್ತಿದೆ. ಅದರ ನಂತರವೂ ಬೀಜಗಳ ಮೊಳಕೆ ಪ್ರಮಾಣ ಕಡಿಮೆಯಾಗಿದ್ದರೆ ಕೂಡಲೇ ಪಞಞರಿಶೀಲಿಸಲು ಇಲಾಖೆ ಬದ್ಧ ವಾಗಿದೆ ಎಂದು ಹೇಳಿದರು.

ಪಂಚನಹಳ್ಳಿ ಕ್ಷೇತ್ರದ ಸದಸ್ಯ ಪಿ.ಸಿ. ಪ್ರಸನ್ನ ಮಾತನಾಡಿ, ಕೆಲವು ಖಾಸಗಿ ಶಾಲೆಗಳು ಆರ್‌ಟಿಇ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಮಕ್ಕಳಿಂದ ಬಲವಂತವಾಗಿ ಹೆಚ್ಚುವರಿ ಹಣವನ್ನು ಪಡೆಯುತ್ತಿವೆ, ಈ ಬಗ್ಗೆ ಶಿಕ್ಷಣ ಇಲಾಖೆ ಯಾವ ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು.

ಕುಂಕನಾಡು ಕ್ಷೇತ್ರದ ಸದಸ್ಯೆ ಶ್ವೇತಾ ಆನಂದ್ ಮಾತನಾಡಿ, ಆರ್‌ಟಿಇನಲ್ಲಿ ಆಯ್ಕೆಯಾದ ಮಕ್ಕಳಿಗೆ ಕೆಲವು ಶಾಲೆಗಳು ಪ್ರವೇಶ ನೀಡುತ್ತಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.

ತಾಪಂ ಉಪಾಧ್ಯಕ್ಷ ಎಚ್.ಸಿ.ರುದ್ರಮೂರ್ತಿ, ಮುಖ್ಯ ಇಒ ಎಚ್.ಆರ್.ಗೋಪಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಭೋಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News