ಶಿವಮೊಗ್ಗ: ಶಿಥಿಲಾವಸೆ್ಥಯಲ್ಲಿರುವ ಸರಕಾರಿ ಉರ್ದು ಶಾಲೆ
ಬಿ. ರೇಣುಕೇಶ್
ಶಿವಮೊಗ್ಗ, ಜೂ. 15: ಒಂದೆಡೆ ಸರಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ನೂರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ. ಹತ್ತು ಹಲವು ಯೋಜನೆ ಕಾರ್ಯಗತಗೊಳಿಸುತ್ತಿದೆ. ಮತ್ತೊಂದೆಡೆ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಲ ಸರಕಾರಿ ಶಾಲೆಗಳ ಬಾಗಿಲು ಮುಚ್ಚುವ ಚರ್ಚೆಗಳು ಕೂಡ ನಡೆಯುತ್ತಿವೆ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ರವರ ತವರೂರು, ಶಿವಮೊಗ್ಗ ನಗರದ ಸೋಮಿನಕೊಪ್ಪಬಡಾವಣೆಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಮಾತ್ರ ತದ್ವಿರುದ್ಧವಾಗಿದೆ. ಈ ಶಾಲೆಯು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದರೂ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಅಲ್ಲದೆ, ಗೋಡೆಗಳು ಬಿರುಕು ಬಿಟ್ಟಿವೆ. ಹೆಂಚಿನ ಹೊದಿಕೆಯ ಮೇಲ್ಛಾವಣಿ ಕಿತ್ತು ಹೋಗಿದೆ. ಮಳೆಯ ನೀರಿನಿಂದ ಸೋರುತ್ತಿದೆ. ಒಟ್ಟಾರೆಯಾಗಿ ಶಾಲೆಯ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದೆ.
ಮತೆ್ತೂಂದೆಡೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಬಡಾವಣೆಯ
ಾಗರಿಕರು, ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲೆಯ ಕಟ್ಟಡ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿ ಗಳಿಗೆ ಮನವಿ ಮಾಡಿದ್ದಾರೆ. ಇಲ್ಲಿಯವರೆಗೂ ಕಟ್ಟಡ ದುರಸ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಏನಾದರೂ ದುರಂತ ಸಂಭವಿಸಿ, ನಮ್ಮ ಮಕ್ಕಳಿಗೆ ಅನಾಹುತವಾದರೆ ಜವಾ ಬ್ದಾರರು ಯಾರು? ಎಂದು ಪೋಷಕರು ಆತಂಕ ವ್ಯಕ್ತಪಡಿ ಸುತ್ತಿದ್ದಾರೆ. ಅವ್ಯವಸ್ಥೆ:
ಸೋಮಿನಕೊಪ್ಪ ಸರಕಾರಿ ಉರ್ದು ಶಾಲೆಯಲ್ಲಿ ಅಂಗನವಾಡಿಯಿಂದ 8 ನೆ ತರಗತಿಯವರೆಗೆ ಸರಿಸುಮಾರು 180 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷ 60 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಜಿಲ್ಲೆಯ ಇತರ ಸರಕಾರಿ ಶಾಲೆಗಳಿಗೆ ಹೋಲಿಕೆ ಮಾಡಿದರೆ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಶಾಲೆಗೆ ದಾಖಲಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಬಡಾವಣೆಯ ಸುತ್ತಮುತ್ತಲಿರುವ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೂ ಇಷ್ಟೊಂದು ಪ್ರಮಾಣದ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ಸೋಮಿನಕೊಪ್ಪಮಾತ್ರವಲ್ಲದೆ, ಸುತ್ತ ಮುತ್ತಲಿನ ಗ್ರಾಮಗಳಾದ ಕೋಟೆ ಗಂಗೂರು, ತ್ಯಾಜವಳ್ಳಿ, ಮೋಜಪ್ಪನ ಹೊ ಸೂರು, ಬಸವನಗಂಗೂರು, ಬೊಮ್ಮನಕಟ್ಟೆ ಬಡಾವಣೆಗಳಿಂದಲೂ ವಿದ್ಯಾರ್ಥಿಗಳು ಈ ಶಾಲೆಗೆ ಆಗಮಿಸುತ್ತಾರೆ. ಆದರೆ ಶಾಲೆಯಲ್ಲಿರುವ 10 ಕೊಠಡಿಗಳಲ್ಲಿ 8 ಕೊಠಡಿಗಳು ದುರಸ್ತಿಯಲ್ಲಿವೆ. ಒಂದೆರಡು ಕೊಠಡಿಗಳ ಮೇಲ್ಛಾವಣಿ ಸಂಪೂರ್ಣವಾಗಿ ಕಿತ್ತು ಹೋಗಿದೆ. ಉಳಿದಂತೆ ಎರಡು ಕೊಠಡಿಗಳು ಮಾತ್ರ ಯೋಗ್ಯವಾಗಿವೆ ಎಂದು ಪೋಷಕರು ದೂರುತ್ತಾರೆ. ‘ಮೇಲ್ಛಾವಣಿಯ ಹೆಂಚುಗಳು ಕಿತ್ತು ಹೋಗುತ್ತಿದ್ದು, ಮರದ ರಿಪೀಸ್‌ಗಳು ಹಾಳಾಗಿವೆ. ಯಾವಾಗ ಬೇಕಾ
ದರೂ ಕೆಳಕ್ಕೆ ಬೀಳುವ ಸ್ಥಿತಿಯಲ್ಲಿವೆ. ಮತ್ತೊಂದೆಡೆ ಮಳೆ ಆರಂಭವಾದರೆ ಗೋಡೆಯ ಮೂಲಕ ನೀರು ಸೋರುತ್ತದೆ. ಇಂತಹ ದುಃಸ್ಥಿತಿಯಲ್ಲಿಯೇ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ರಾಜ್ಯದ ಹಲವೆಡೆ ಮಕ್ಕಳ ಕೊರತೆಯಿಂದ ಸರಕಾರಿ ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿಯಲ್ಲಿವೆ. ಆದರೆ ನಮ್ಮ ಬಡಾವಣೆಯಲ್ಲಿರುವ ಈ ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಪೈಪೋಟಿ ವೊಡ್ಡುವ ರೀತಿಯಲ್ಲಿ ಈ ಶಾಲೆ ಕಾರ್ಯನಿರ್ವಹಣೆ ಮಾಡುತ್ತಿದೆ. ಆದರೆ ಕಟ್ಟಡದ ಸ್ಥಿತಿ ಮಾತ್ರ ಹೇಳತೀರದಾಗಿದೆ.
ಸರಕಾರಿ ಶಾಲೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ಖರ್ಚು ಮಾಡುತ್ತಿರುವುದಾಗಿ ಸರಕಾರ ಹೇಳಿಕೆಗಳನ್ನು ನೀಡುತ್ತಿದೆ. ಆದರೆ ನಮ್ಮ ಶಾಲೆಯ ಸ್ಥಿತಿ ಮಾತ್ರ ಬದಲಾಗಿಲ್ಲ. ಹಲವು ವರ್ಷಗಳಿಂದ ದುಃಸ್ಥಿತಿಯಲ್ಲಿಯೇ ಇದೆ ಎಂದು ಪೋಷಕರಾದ ಸೈಯದ್ ಹಾಗೂ ಶಫೀ ಎಂಬವರು ತೀವ್ರ ಅ
ಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುವ ಸರಕಾರಿ ಉರ್ದು ಶಾಲೆಯ ಕಟ್ಟಡ ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ಮೂಲಕ ಈ ಸರಕಾರಿ ಶಾಲೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
1932 ರಲ್ಲಿ ನಿರ್ಮಾಣವಾದ ಕಟ್ಟಡ : ಸರಿಸುಮಾರು 1932 ರಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನಲಾದ ಸೋಮಿನಕೊಪ್ಪಉರ್ದು ಶಾಲೆಯ ಕಟ್ಟಡ ಪ್ರಸ್ತುತ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಹಾಲಿ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಸರಕಾರಿ ಶಾಲೆಯ ಬಗ್ಗೆ ಯಾರಿಗೂ ಕಾಳಜಿಯಿಲ್ಲವಾಗಿದ್ದು ಹೇಳುವವರು, ಕೇಳುವವರ್ಯಾರು ಇಲ್ಲದಂತಾಗಿದೆ ಎಂದು ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರ ನೆರವಿನಿಂದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹಲವು ಅನುಕೂಲ ಮಾಡಿಕೊಡಲಾಗಿದೆ. ಉಳಿದಂತೆ ಸರಕಾರ ದಿಂದ ಯಾವುದೇ ನೆರವು ಲಭ್ಯವಾಗಿಲ್ಲ ಎಂದು ಪೋಷಕರು ದೂರಿದ್ದಾರೆ.
<ಪರಿಸ್ಥಿತಿ ಹೀಗಿದ್ದರೂ ಶಾಲೆಗೆ ಮಕ್ಕಳ ಸೇರ್ಪಡೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇನ್ನಾದರೂ ಸರಕಾರ ಈ ಶಾಲೆಯ ಅಭಿವೃದ್ಧಿಗೆ ಗಮನಹರಿಸಬೇಕು’ಎಂದು ಸ್ಥಳೀಯ ಮುಖಂಡರು ಆಗ್ರಹಿಸುತ್ತಾರೆ. ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ದುರಸ್ತಿ ಮಾಡುವಂತೆ ಸಂಬಂದ ಪಟ್ಟವರೆಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಶಾಲಾ ಕಟ್ಟಡ ಯಾವಾಗ ಏನಾಗುವುದೋ ಎಂಬ ಆತಂಕ ನಮ್ಮಲ್ಲಿ ಇದೆ. ಕೈಯಿಂದ ಹಣ ಹಾಕಿ ಕೆಲ ಸಣ್ಣಪುಟ್ಟ ಕೆಲಸ ಮಾಡಿಸಲಾಗಿದೆ. ಸರಕಾರ ಇಲಾಖೆಗಳು ಈ ಬಗ್ಗೆ ಶೀಘ್ರ ಗಮನ ಹರಿಸಿ ಶಾಲೆಗೆ ಕಾಯಕಲ್ಪ ನೀಡಬೇಕು. ಝುಬೇರ್ ಅಹ್ಮದ್
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ
ಪ್ರತಿಭಟನೆ ಅನಿವಾರ್ಯ:
ದುಃಸ್ಥಿತಿಯಲ್ಲಿರುವ ಶಾಲೆಯ ಕಟ್ಟಡ ಸರಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ರವರು ಅಗತ್ಯ ಕ್ರಮಕೈಗೊಳ್ಳಬೇಕು. ಅಲ್ಲದೆ, 9 ಹಾಗೂ 10 ನೆ ತರಗತಿಗಳನ್ನು ಪ್ರಾರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಶಫೀವುಲ್ಲಾ, ಸೈಯದ್ ರಸೂಲ್‌ರವರು ತಿಳಿಸುತ್ತಾರೆ. 8 ನೆ ತರಗತಿ ತೇರ್ಗಡೆಯಾದ ಬಳಿಕ ಹಲವು ವಿದ್ಯಾರ್ಥಿನಿಯರು ಶಿಕ್ಷಣ ಮುಂದುವರಿಸುತ್ತಿಲ್ಲ. ಪೋಷಕರು ಮನೆಯಿಂದ ದೂರವಿರುವ ಶಾಲೆಗಳಿಗೆ ಕಳುಹಿಸುತ್ತಿಲ್ಲ. ಇದರಿಂದ ಪ್ರತಿವರ್ಷ ಸುಮಾರು 15 ರಿಂದ 20 ವಿದ್ಯಾರ್ಥಿನಿಯರು ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮಿನಕೊಪ್ಪಉರ್ದು ಶಾಲೆಯಲ್ಲಿ 8 ಹಾಗೂ 10 ನೆ ತರಗತಿಗಳನ್ನು ಆರಂಭಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಆದರೆ ಈವರೆಗೂ ಸಂಬಂಧಿಸಿದವರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.