ಕಾವೇರಿ ನದಿ ಸ್ವಚ್ಛತೆಗೆ ಜನಜಾಗೃತಿ ಆಂದೋಲನ
ಮಡಿಕೇರಿ ಜೂ.15 : ಕಾವೇರಿ ನದಿಯ ಸ್ವಚ್ಛತೆ ಮತ್ತು ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಸರಕಾರದ ಗಮನ ಸೆಳೆಯಲು ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‌ಹಾರ್ ವರೆಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮೂಲಕ ನಡೆಸಲಾಗುತ್ತಿರುವ ಪಾದಯಾತ್ರೆಗೆ ಬುಧವಾರ ಕೊಡಗಿನ ತಲಕಾವೇರಿಯಲ್ಲಿ ಚಾಲನೆ ನೀಡಲಾಯಿತು.
ಕಾವೇರಿ ನದಿ ಉಗಮ ಸ್ಥಳ ತಲಕಾವೇರಿಯಲ್ಲಿ ಸಾಧು ಸಂತರು, ಗಣ್ಯರು, ಅತಿಥಿಗಳು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾವೇರಿ ನದಿ ಉಳಿಸಿ, ಕಾವೇರಿ ನದಿ ಸಂರಕ್ಷಿಸಿ ಎಂಬ ಸ್ಟಿಕ್ಕರ್‌ನ್ನು ಬಿಡುಗಡೆ ಗೊಳಿಸಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ರಮಾನಂದ ಸ್ವಾಮೀಜಿ, ಪಾದಯಾತ್ರೆ ಮೂಲಕ ನದಿ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ನದಿ ಮತ್ತು ಸುತ್ತಮುತ್ತಲ ಪ್ರದೇಶದ ಪರಿಸ್ಥಿತಿಯನ್ನು ವೀಡಿಯೊ ಹಾಗೂ ಛಾಯಾಚಿತ್ರದ ಮೂಲಕ ದಾಖಲಿಸಿ ಸಮಗ್ರ ವರದಿಯನ್ನು ಸರಕಾರಕ್ಕೆ ನೀಡಲಾಗುವುದು. ಕರ್ನಾಟಕ ರಾಜ್ಯದಲ್ಲಿ ನೀರಿನ ಉತ್ಪಾದನೆ ಬಗ್ಗೆ ಕಾಳಜಿ ವಹಿಸಬೇಕಾಗಿದ್ದು, ತಮಿಳುನಾಡಿನಲ್ಲಿ ನೀರಿನ ಸಂರಕ್ಷಣೆ ಕುರಿತು ಗಮನ ಹರಿಸಬೇಕಾಗಿದೆ. ಕಾವೇರಿ ನದಿ ಸ್ವಚ್ಛತೆ ಬಗ್ಗೆ ಈ ಎರಡೂ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಗಂಗಾ, ಗೋದಾವರಿ, ಯಮುನಾ, ಕಾವೇರಿ ಸೇರಿದಂತೆ ದೇಶದ ಪ್ರಮುಖ ನದಿಗಳನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಒತ್ತಾಯಿಸಿದ ಅವರು, ಹೀಗೆ ಮಾಡುವುದರಿಂದ ನದಿಗಳ ಸಂರಕ್ಷಣೆ ಸಾಧ್ಯವೆಂದು ಅಭಿಪ್ರಾಯಪಟ್ಟರು. ಪಾದಯಾತ್ರೆಯ ಮೂಲಕ ಸಂಗ್ರಹಿಸುವ ಕಾವೇರಿ ನದಿ ಸ್ಥಿತಿಗತಿಯ ವರದಿಯಾಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಲಾಗುವುದೆಂದು ರಮಾನಂದ ಸ್ವಾಮೀಜಿ ತಿಳಿಸಿದರು.
ಅಖಿಲ ಭಾರತ ಸನ್ಯಾಸಿ ಸಂಘ, ಅಣ್ಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ವತಿಯಿಂದ ಆಂದೋಲನದ ಸಂಚಾಲಕರಾದ ರಮಾ ನಂದ ಸ್ವಾಮೀಜಿ ನೇತೃತ್ವದಲ್ಲಿ 60 ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, ಆಗಸ್ಟ್ 14 ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಪೂಂಪ್‌ಹಾರ್‌ನಲ್ಲಿ ಅಂತ್ಯಗೊಳ್ಳಲಿದೆ ಎಂದು ಅವರು ಇದೆ ವೇಳೆ ಮಾಹಿತಿ ನಿಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ನಾಡಿನ ಜೀವನದಿಯಾದ ಕಾವೇರಿಯು ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ, ತಮಿಳುನಾಡು ರಾಜ್ಯಗಳ ಮೂಲಕ ಸುಮಾರು 700 ಕಿ.ಮೀ. ವರೆಗೆ ಹರಿಯುತ್ತಿದೆ. ಆದ್ದರಿಂದ ಕಾವೇರಿ ನದಿ ಪಾತ್ರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಕೆ. ಮನುಮುತ್ತಪ್ಪ,ಜೆಡಿಎಸ್ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಶ್ರೀಓಂಕಾರೇಶ್ವರ ದೇವಾಲಯದ ಪಾರುಪತ್ತೆದಾರ ಚಿ.ನಾ. ಸೋಮೇಶ್ ಥೇನಿಯ, ಓಂಕಾರನಂದ ಆಶ್ರಮದ ಅಭಯಾನಂದಪುರಿ ಸ್ವಾಮೀಜಿ, ದಿಂಡುಗಲ್ಲಿನ ಸಿರುಮಲೆ ಬಾಲಯೋಗಿ ಸ್ವಾಮೀಜಿ, ಕಾರ್ಯದರ್ಶಿ ಜಿ.ಜೆ. ಅರುಳ್ ವೀರಮಣಿ, ಬಿ.ಬಿ. ಭಾರತೀಶ್, ಭಾಸ್ಕರ್ ನಾಯಕ್, ಡಿ.ಆರ್. ಸೋಮಶೇಖರ, ಬಿ.ಎಂ. ಲತೀಶ್, ಕುಮಾರ ಸ್ವಾಮಿ, ಕೆ.ಜಿ. ಮನು, ನಿಡ್ಯಮಲೆ ದಿನೇಶ್ ಮತ್ತಿತರರು ಹಾಜರಿದ್ದರು.
ಕೊಡಗು ಜಿಲ್ಲೆಯಲ್ಲಿ ಜೂ. 16 ರಂದು ಬಲ್ಲಮಾವಟಿ, ನೆಲಜಿ, ನಾಪೋಕ್ಲು, ಜೂ.17ರಂದು ಬಲಮುರಿ, ಜೂ. 18ರಂದು ಕೊಂಡಂಗೇರಿ, ನೆಲ್ಯಹುದಿಕೇರಿ, ಜೂ.19ರಂದು ನಂಜರಾಯಪಟ್ಟಣ, ದುಬಾರೆ, ಜೂ. 20ರಂದು ಗುಡ್ಡೆಹೊಸೂರು, ಕುಶಾಲನಗರ, ಕಣಿವೆ, ಜೂ.21ರಂದು ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೊಣ ನೂರು, ರಾಮನಾಥಪುರದಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ.
<ಎಂ.ಎನ್. ಚಂದ್ರಮೋಹನ್
ಆದೋಲನ ಸಮಿತಿಯ ರಾಜ್ಯ ಸಂಚಾಲಕ