ಸಾಂಕ್ರಾಮಿಕ ರೋಗ ತಡೆ: ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ
ಮಡಿಕೇರಿ, ಜೂ.16: ಸಾಂಕ್ರಾಮಿಕ ಹಾಗೂ ಕೀಟಜನ್ಯದಿಂದ ಹರಡುವ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸ್ವಚ್ಛತಾ ಸಪ್ತಾಹಕ್ಕೆ ಗುರುವಾರ ಚಾಲನೆ ದೊರೆಯಿತು. ನಗರದ ಮಹದೇವಪೇಟೆಯ ಆರೋಗ್ಯ ಕೇಂದ್ರದಲ್ಲಿ ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರಾ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ನಗರಸಭಾ ಸದಸ್ಯರಾದ ಪೀಟರ್, ನೋಡಲ್ ಅಧಿಕಾರಿ ಶ್ರೀನಿವಾಸಗೌಡ ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ ನೀಡಿದರು. ಮಳೆಗಾಲದ ಅವಧಿಯಲ್ಲಿ ಸಾಂಕ್ರಾಮಿಕ ಹಾಗೂ ಕೀಟಜನ್ಯದಿಂದ ಡೆಂಗ್, ಚಿಕುನ್‌ಗುನ್ಯಾ, ಮಲೇರಿಯಾ ಮತ್ತಿತರ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜೂ.22ರವರೆಗೆ ಸ್ವಚ್ಛತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೋಡಲ್ ಅಧಿಕಾರಿ ಶ್ರೀನಿವಾಸ ಗೌಡ ತಿಳಿಸಿದರು. ಜಿಲ್ಲೆಯಲ್ಲಿ ಜೂ.17ರಂದು ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ, 18ರಂದು ಶಾಲಾ-ಕಾಲೇಜು ಹಾಗೂ ಹೊಟೇಲ್‌ಗಳಲ್ಲಿ, 19ರಂದು ಸರಕಾರಿ ಕಟ್ಟಡಗಳಲ್ಲಿ, 20ರಂದು ಸಾರ್ವಜನಿಕ ಪ್ರದೇಶಗಳಲ್ಲಿ, 21ರಂದು ಆಸ್ಪತ್ರೆಗಳಲ್ಲಿ ಹಾಗೂ 22ರಂದು ಕಾರ್ಖಾನೆ ಪ್ರದೇಶಗಳಲ್ಲಿ ಸ್ವಚ್ಛತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ಮಾಹಿತಿ ನೀಡಿದರು.
ಡೆಂಗ್, ಚಿಕುನ್‌ಗುನ್ಯಾ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಕೈಜೋಡಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ ಮಾತನಾಡಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಾಗೃತಿ ಅಗತ್ಯ. ಆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಾಹಿತಿ, ಮಾರ್ಗದರ್ಶನ, ಶಿಕ್ಷಣವನ್ನು ಸಂಚಾರಿ ವಾಹನದ ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು. ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರಾ ಮಾತನಾಡಿ, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಎಲ್ಲರೂ ಮುಂದಾಗಬೇಕು. ಮನೆಯ ಹಾಗೂ ಪರಿಸರದ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮತ್ತು ಜ್ವರ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ.ದೇವಿ ಆನಂದ್ ಮಾತನಾಡಿ, ಸಂಚಾರಿ ವಾಹನದ ಮೂಲಕ ಗ್ರಾಮಗಳಿಗೆ ತೆರಳಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಆರ್.ಸಿ.ಎಚ್.ಅಧಿಕಾರಿ ಡಾ.ಪಾರ್ವತಿ, ಡಾ.ಆಶಾ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.