×
Ad

ಕಾರವಾರ: ಸಾಂಪ್ರದಾಯಿಕ ಮೀನುಗಾರಿಕೆ ಚುರುಕು

Update: 2016-06-16 22:47 IST

<ಶ್ರೀನಿವಾಸ ಬಾಡಕರ

 ಕಾರವಾರ, ಜೂ.16: ಮಳೆಗಾಲ ಪ್ರಾರಂಭವಾಗಿರುವುದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದು, ಅದೇ ರೀತಿ ತಾಲೂಕಿನ ಸಾಂಪ್ರದಾಯಿಕ ಮೀನುಗಾರಿಕೆ ಚಟುವಟಿಕೆ ಕೂಡ ಚುರುಕುಗೊಂಡಿದೆ.

  ನಗರದ ರವೀಂದ್ರನಾಥ ಕಡಲತೀರದ ಮೇಲೆ ಸಾಂಪ್ರದಾಯಿಕ ಮೀನುಗಾರಿಕೆ ಅತ್ಯಂತ ಹಳೆಯ ಪದ್ಧತಿಯಾಗಿದೆ. ಏಂಡಿಬಲೆ, ಚಿಟ್‌ಕಾಂಟ್ಲೆ, ಬೀಡುಬಲೆ, ಪಟ್ಟೆಬಲೆ ಇವು ಸಾಂಪ್ರದಾಯಿಕ ಮೀನುಗಾರಿಕೆ ಪದ್ಧತಿಗಳಲ್ಲಿ ಕೆಲವೊಂದು ಮಾದರಿಗಳಾಗಿವೆ. ಹಿಂದೆ 60 ಮತ್ತು 70 ರ ದಶಕಗಳಲ್ಲಿ ಅತ್ಯಂತ ಉಚ್ಚ್ರಾಯ ಸ್ಥಿತಿಯಲ್ಲಿದ್ದ ದೈತ್ಯಾಕಾರದ ರಂಪಣಿ ಬಲೆಯ ಸಣ್ಣ ಪ್ರಮಾಣದ ಪ್ರತಿರೂಪವೇ ಏಂಡಿಬಲೆಯಾಗಿದೆ.

    

ಈಗ ಕಡಲ ತೀರದ ಮೇಲೆ ಏಂಡಿಬಲೆಯದೇ ದರ್ಬಾರು. ಇಲ್ಲಿ ಕೆಲವರು ಏಂಡಿಬಲೆಗೆ ಉಪಯೋಗಿಸುವ ದೋಣಿ, ಬಲೆ, ಸಲಕರಣೆಗಳನ್ನು ಸುಸ್ಥಿತಿಯಲ್ಲಿಡುವ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ದೋಣಿಗಳನ್ನು ದುರಸ್ತಿಗೊಳಿಸುವ ಹಾಗೂ ಹಾಳಾದ ಹಳೆಯ ಬಲೆ ತೆಗೆದು ಹೊಸ ಬಲೆ ಅಳವಡಿಸುವ ಕಾರ್ಯದಲ್ಲಿ ಸಾಂಪ್ರದಾಯಿಕ ಮೀನುಗಾರರು ತಲ್ಲೀನರಾಗಿದ್ದಾರೆ. ಅದೇ ರೀತಿ ನದಿಗಳಲ್ಲೂ ಸಾಂಪ್ರದಾಯಿಕ ರೀತಿಯಲ್ಲಿ ಮೀನುಗಾರಿಕೆ ಮುಂದುವರಿದೆ. ಜಿಲ್ಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ 61 ದಿನಗಳ ನಿಷೇಧ ಇರುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಈಗ ಪ್ರಾಶಸ್ತ್ಯ ಕಾಲವಾಗಿದೆ. ಈ ಸಮಯದಲ್ಲಿಯೇ ಸಾಂಪ್ರದಾಯಿಕ ಮೀನುಗಾರರು ಹೆಚ್ಚು ದುಡಿದು, ಕೈತುಂಬ ಹಣ ಸಂಪಾದಿಸಬಹುದಾಗಿದೆ. ಈ ಸಂದರ್ಭದಲ್ಲಿ ಒಳ್ಳೆಯ ಜಾತಿಯ ಖಡಚಿ, ಧೋಡಿ(ಬಣಗು), ಬಂಗುಡೆ, ತಾರ್ಲೆ, ಪಾಂಪ್ಲೆಟ್, ಶೆಟ್ಲಿ ಮುಂತಾದ ಗುಣಮಟ್ಟದ ಮೀನಿಗೆ ಒಳ್ಳೆಯ ದರ ಲಭಿಸುತ್ತಿದೆ. ಮೀನಿನ ದರ ಗಗನಕ್ಕೆ:  

ಯಾಂತ್ರೀಕೃತ ಮೀನುಗಾರಿಕೆ ಬಂದ್ ಆಗಿರುವುದರಿಂದ ಮೀನುಮಾರುಕಟ್ಟೆಯಲ್ಲಿ ಮೀನಿನ ದರ ಗಗನ ತಲುಪಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಮೀನು ಪೂರೈಕೆ ಇಲ್ಲವಾಗಿರುವುದರಿಂದ ಸಹಜವಾಗಿ ಮೀನಿನ ದರ ಹೆಚ್ಚುತ್ತಿದೆ. ಐಸ್ ಪ್ಲಾಂಟ್‌ನಲ್ಲಿ ದಾಸ್ತಾನಿಟ್ಟ ಫ್ರೀಜಿಂಗ್ ಮೀನಿಗೆ ತಾಜಾ ಮೀನಿಗಿಂತ ದುಪ್ಪಟ್ಟು ಬೆಲೆ ತೆರಬೇಕಾಗಿದೆ. ಜಿಲ್ಲೆಯ ಬೇರೆ ತಾಲೂಕಿಗೆ ಹೋಲಿಸಿದರೆ, ಕಾರವಾರದಲ್ಲಿ ಮಾತ್ರ ಮೀನಿನ ದರ ಏರುಗತಿಯಲ್ಲಿದೆ. ವಿವಿಧೆಡೆ ನಡೆಯುವ ಸಾಂಪ್ರದಾಯಿಕ ಮೀನುಗಾರಿಕೆ: ತಾಲೂಕಿನ ಕಾರವಾರ, ಮುದಗಾ, ದೇವಬಾಗ, ಮಾಜಾಳಿ ಮುಂತಾದ ಕಡಲ ತೀರಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭವಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲೂ ಕೂಡ ಸಾಂಪ್ರದಾಯಿಕ ಮೀನುಗಾರಿಕೆ ಆರಂಭವಾಗಿದೆ. ಅಂಕೋಲಾ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ ಕಡೆಯಿಂದಲೂ ಕಾರವಾರದ ಮೀನು ಮಾರುಕಟ್ಟೆಗೆ ನೂರಾರು ಗಟ್ಟಲೆ ಮೀನು ಬುಟ್ಟಿಗಳು ಲಗ್ಗೆ ಇಡಲು ಆರಂಭವಾಗಿದೆ. ಮೀನಿನ ಸಂತಾನೋತ್ಪತ್ತಿ:   ಜೂನ್ ತಿಂಗಳ ಅಂತ್ಯದೊಳಗೆ ಒಳ್ಳೆಯ ಮಳೆಯಾದರೆ, ನದಿ ಮೂಲಕ ಮಳೆ ನೀರು ಕಡಲ ಒಡಲು ಸೇರುತ್ತದೆ. ಕಡಲು ಕಲುಷಿತವಾಗಿ ನದಿ ಮೂಲಕ ಕಡಲು ಸೇರಿದ ಕೆಂಪು ನೀರಿನ ವಾಸನೆಗೆ ಮೀನು ಮೊಟ್ಟೆ ಇಡಲು ಧಾವಿಸಿ ಬರುತ್ತವೆ. ಆಳ ಸಮುದ್ರದಿಂದ ಸಂತಾನೋತ್ಪತ್ತಿಗೆ ಬರುವ ಮೀನು, ಸಾಗರ ಮತ್ತು ನದಿ ಸೇರುವ ಸಂಗಮಗಳಲ್ಲಿ ಇಲ್ಲವೇ ನದಿಯ ಇಕ್ಕೆಲಗಳಲ್ಲಿರುವ ಕಾಂಡ್ಲಾ ಗಿಡಗಳ ಅಡಿಯಲ್ಲಿ ಮೊಟ್ಟೆ ಇಡುತ್ತವೆ.

 ಮೊಟ್ಟೆ ಇಟ್ಟ ಮೀನು ನಂತರ ಆಳ ಸಮುದ್ರಕ್ಕೆ ಹೊರಡಲು ಅಣಿಯಾಗುತ್ತವೆ. ಇಲ್ಲವೇ ಕೆಲವು ಜಾತಿಯ ಮೀನುಗಳು ಮೊಟ್ಟೆ ಹಾಕಿದ ಬಳಿಕ ಸಾಯುತ್ತವೆ. ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುತ್ತಿರುವುದರಿಂದ ಈ ಮೀನುಗಳೇ ಮೀನುಗಾರರ ಬಲೆಗೆ ಬೀಳುತ್ತವೆ ಎನ್ನುತ್ತಾರೆ ಹಿರಿಯ ಮೀನುಗಾರ ಕೃಷ್ಣ ತಾಂಡೇಲ್.

 ಸಾಂಪ್ರದಾಯಿಕ ಮೀನುಗಾರರ ಸುಗ್ಗಿ:    ಸಾಮಾನ್ಯವಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮರಿ ಹಾಕಲು ಬರುವ ಮೀನುಗಳು ವಿವಿಧ ಪ್ರಜಾತಿ, ಪ್ರಭೇದಗಳಿಗೆ ಸೇರಿರುತ್ತವೆ. ಸಂತಾನೋತ್ಪತ್ತಿಗೆ ಬರುವ ಮೀನು ಹಾಗೂ ಮರಿಗಳು ದೊಡ್ಡ ಗಾತ್ರಕ್ಕೆ ಬೆಳೆದ ಮೀನನ್ನು ಮೀನುಗಾರರಿಂದ ನಿರಂತರವಾಗಿ ಮೂರು ತಿಂಗಳುಗಳ ತನಕ ಹಿಡಿಯಲಾಗುತ್ತದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ತನಕ ಮೀನು ಬೇಟೆ ನಡೆಯುತ್ತಿರುತ್ತದೆ. ಇದು ಒಂದು ರೀತಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯ ಸುಗ್ಗಿ ಕಾಲವಿದ್ದಂತೆ. ಇಲ್ಲಿ ವಿಶೇಷವಾಗಿ ಕಾರವಾರ ಕಡಲತೀರದ ಮೇಲೆ ಸುಮಾರು 30ಕ್ಕೂ ಹೆಚ್ಚಿನ ಏಂಡಿಬಲೆ ಹಾಗೂ ನೂರಾರು ಸಂಖ್ಯೆಯಲ್ಲಿ ಮೀನುಗಾರರು ಬಲೆ ಎಳೆಯಲು ಭಾಗವಹಿಸುತ್ತಾರೆ. ನಂತರ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭವಾದ ನಂತರ ಸಾಂಪ್ರದಾಯಿಕ ಮೀನುಗಾರಿಕೆ ಮುಕ್ತಾಯದ ಹಂತಕ್ಕೆ ತಲುಪುತ್ತದೆ.

  ಮಳೆಗಾಲದಲ್ಲಿ ನದಿ ಮೂಲಕ ಸಾಗರ ಸೇರುವ ಕೊಳಚೆ ನೀರಿನಲ್ಲಿ ಸೂಕ್ಷ್ಮ ಜೀವಿಗಳು (ಪ್ಲಾಂಟೆಮ್) ಉತ್ಪತ್ತಿಯಾಗುತ್ತವೆ. ಇವು ಮೀನಿಗೆ ಪ್ರಿಯವಾದ ಆಹಾರವಾಗಿರುವುದರಿಂದ, ಸಂತಾನೋತ್ಪತ್ತಿಗೆ ಇದೇ ಸ್ಥಳವನ್ನು ಆಯ್ದುಕೊಳ್ಳುತ್ತವೆ. ಸಾಮಾನ್ಯವಾಗಿ ಮೀನುಗಳು ಸೇರಿದಂತೆ ಸಾಗರದ ಜೀವಿಗಳು ಜೂನ್, ಜುಲೈ ನಂತರ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಎರಡು ಬಾರಿ ಸಂತಾನೋತ್ಪತ್ತಿ ಮಾಡುತ್ತವೆ.

                                          

                     -ಡಾ. ವಿ.ಎನ್.ನಾಯಕ, ಗೌರವ ಕಾರ್ಯದರ್ಶಿ, ಜಿಲ್ಲಾ ವಿಜ್ಞಾನ ಕೇಂದ್ರ, ಕಾರವಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News