ಪಕ್ಷದ ಜಿಲ್ಲಾ ಸಮಿತಿ ಖಂಡನೆ
ವೀರಾಜಪೇಟೆ, ಜೂ. 16: ರಾಜ್ಯದ ವಿಧಾನ ಪರಿಷತ್, ರಾಜ್ಯ ಸಭೆಗೆ ವಿಧಾನಸಭೆಯಿಂದ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಎಂಟು ಮಂದಿ ಶಾಸಕರು ಅಡ್ಡ ಮತದಾನ ಮಾಡಿರುವುದು ಪಕ್ಷಕ್ಕೆ ಮಾಡಿದ ದ್ರೋಹ, ಇದನ್ನು ಪಕ್ಷದ ಹಿತೈಷಿಗಳು, ಕಾರ್ಯಕರ್ತರು ತೀವ್ರವಾಗಿ ಖಂಡಿಸುವುದಾಗಿ ಪಕ್ಷದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು.
ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಜನತಾದಳ ಕಾರ್ಯಾಧ್ಯಕ್ಷರ ಸಮಿತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಕೇತ್ ಪೂವಯ್ಯ, ಅಡ್ಡ ಮತದಾನ ಮಾಡಿರುವ ಎಂಟು ಶಾಸಕರ ಕ್ಷೇತ್ರಗಳಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಇವರು ಸ್ವತ: ಶ್ರಮಿಸಿ ಎಂಟು ಮಂದಿಯನ್ನು ವಿಧಾನ ಸಭೆಗೆ ಆಯ್ಕೆ ಮಾಡಿದ್ದರು. ಪಕ್ಷದ ವಿರುದ್ಧ ಮತ ಚಲಾಯಿಸಿ ಸ್ವಾರ್ಥ ಸಾಧಿಸಿ ಪಕ್ಷದ ಸಂವಿಧಾನದ ನಿಯಮಾವಳಿಗಳಿಗೆ ಅಪಚಾರ ಮಾಡಿದ್ದಾರೆ. ಈ ಎಂಟು ಮಂದಿ ಶಾಸಕರು ಪ್ರತಿಸ್ಪರ್ಧಿ ಅಭ್ಯರ್ಥಿಯ ಆಮಿಷಕ್ಕೊಳಗಾಗಿರುವುದು ಸಾಬೀತಾಗಿದೆ. ದೇವೇಗೌಡರು ಪ್ರಧಾನಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಜನ ಜನಿತರಾದವರು. ರಾಜ್ಯದ ಜನತೆ ದೇವೇಗೌಡರ ಜಾತ್ಯತೀತ ಸಿದ್ಧಾಂತದ ಮೇಲೆ ಅಪಾರ ವಿಶ್ವಾಸ, ನಂಬಿಕೆ ಇಟ್ಟವರು. ಅವರು ಕೇಂದ್ರ ಹಾಗೂ ರಾಜ್ಯ ಸರಕಾರದ ನಾಯಕತ್ವದಲ್ಲಿ ಅಧಿಕಾರ ವಿಕೇಂದ್ರೀ ಕರಣ, ನಿಜವಾದ ರೈತರಿಗೆ ಮೂಲ ಸೌಲಭ್ಯಗಳು, ಜೊತೆಗೆ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿದ ಹರಿಕಾರರು ಎಂದು ಹೇಳಿದರು.
ಪಕ್ಷದ ಜಿಲ್ಲಾ ನಾಯಕ ಸಿ.ಎ.ನಾಸಿರ್ ಮಾತನಾಡಿ, ಪಕ್ಷದ ಎಂಟು ಶಾಸಕರ ಅಡ್ಡ ಮತದಾನ ಪಕ್ಷದ ವಿರುದ್ಧದ ಅಕ್ಷಮ್ಯ ಅಪರಾಧ. ನಿನ್ನೆ ದಿನ ಬೆಂಗಳೂರಿನಲ್ಲಿ ಶಾಸಕರ ಪ್ರತಿಕೃತಿಗೆ ಕಾರ್ಯಕರ್ತರು ಹಿತೈಷಿಗಳು ಚಪ್ಪಲಿ ಹಾರ ಹಾಕಿ ಪ್ರತಿಭಟಿಸಿದ್ದಾರೆ. ಇವರುಗಳ ಗೆಲುವಿಗೆ ಕಾರಣರಾದ ಮತದಾರರು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಇವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.
ವೀರಾಜಪೇಟೆ ಪಪಂ ಹಿರಿಯ ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ, ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡದೆ ಆಮಿಷಕ್ಕೊಳಗಾಗಿ, ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಪಕ್ಷದ ಘನತೆಗೆ ಧಕ್ಕೆಯಾಗುವಂತೆ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿರುವುದರಿಂದ ಎಂಟು ಮಂದಿ ಶಾಸಕರನ್ನು ಅಮಾನತು ಮಾಡಿರುವುದು ಪಕ್ಷದ ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ವೀರಾಜಪೇಟೆ ನಗರ ಸಮಿತಿಯ ಆರ್.ಎ.ಸಕ್ಲೈನ್, ಪಕ್ಷದ ಮುಖಂಡರಾದ ಎಂ.ಎನ್.ಅಶ್ರಫ್ ಅಲಿ ಮತ್ತಿತರರು ಉಪಸ್ಥಿತರಿದ್ದರು.