ಸಚಿವ ಸಂಪುಟದಿಂದ ಕಿಮ್ಮನೆ ಔಟ್; ಕಾಗೋಡು ಇನ್ ಸಾಧ್ಯತೆ
<ಬಿ. ರೇಣುಕೇಶ್
ಶಿವಮೊಗ್ಗ, ಜೂ. 16: ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಚಿವ ಸಂಪುಟ ಪುನಾರಾಚನೆಗೆ ನಿರ್ಧರಿಸಿದ್ದು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರನ್ನು ಕೈಬಿಡುವ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಕಿಮ್ಮನೆ ರತ್ನಾಕರ್‌ರವರಿಗೆ ಸಚಿವ ಸ್ಥಾನದ ಹುದ್ದೆ ಕೈ ತಪ್ಪುವ ಸಾಧ್ಯತೆಯಿದೆ ಎಂಬ ಮಾತುಗಳು ಜಿಲ್ಲಾ ಕಾಂಗ್ರೆಸ್ ಪಾಳೇಯದಲ್ಲಿ ಚರ್ಚೆಗಳು ಬಿರುಸುಗೊಳ್ಳುವಂತೆ ಮಾಡಿದೆ. ಈ ನಡುವೆ ಕಿಮ್ಮನೆಯವರನ್ನು ಸಚಿವ ಸಂಪುಟದಿಂದ ಕೈ ಬಿಡಬಾರದು ಎಂದು ಅವರ ಬೆಂಬಲಿಗರು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಗುರುವಾರ ತೀರ್ಥಹಳ್ಳಿ ಕಾಂಗ್ರೆಸ್ ಕಿಸಾನ್ ಘಟಕವು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಯಾವುದೇ ಕಾರಣಕ್ಕೂ ಕಿಮ್ಮನೆ ರತ್ನಾಕರ್‌ರವರನ್ನು ಸಚಿವ ಸ್ಥಾನದಿಂದ ಕೈಬಿಡಬಾರದು ಎಂದು ಆಗ್ರಹಿಸಿದೆ. ಘಟಕದ ವಕ್ತಾರ ಪಡುವಳ್ಳಿ ಹರ್ಷೇಂದ್ರ ಕುಮಾರ್ ಹಾಗೂ ಕಾರ್ಯದರ್ಶಿ ಶಿವರಾಜಪುರ ಮಂಜುನಾಥ ಶೆಟ್ಟಿಯವರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕಿಮ್ಮನೆ ರತ್ನಾಕರ್‌ರವರು ಸಮರ್ಥವಾಗಿ ಸಚಿವ ಸ್ಥಾನ ನಿರ್ವಹಣೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಮುಂದುವರಿಸಬೇಕೆಂದು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿಕೊಂಡಿದ್ದಾರೆ.
ಕಾಗೋಡಿಗೆ ಅವಕಾಶ?:
ಪಕ್ಷದ ಉನ್ನತ ಮೂಲಗಳ ಪ್ರಕಾರ ಕಿಮ್ಮನೆ ರತ್ನಾಕರ್‌ರವರಿಗೆ ಸಚಿವ ಸ್ಥಾನ ಕೈತಪ್ಪುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಕಿಮ್ಮನೆಯವರ ಬದಲಿಗೆ ಸರಕಾರಕ್ಕೆ ಮಗ್ಗಲ ಮುಳ್ಳಾಗಿ ಕಾಡುತ್ತಿರುವ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪರವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸರಕಾರ ಅಸ್ತಿತ್ವಕ್ಕೆ ಬಂದ ವೇಳೆ ಕಾಗೋಡು ತಿಮ್ಮಪ್ಪರವರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಹಿರಿತನದ ಆಧಾರದ ಮೇಲೆ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ತಮ್ಮ ವಿರೋಧಿ ಪಾಳೇಯದಲ್ಲಿ ಗುರುತಿಸಿಕೊಂಡಿದ್ದ ಕಾಗೋಡುರನ್ನು ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಲು ಇಚ್ಛಿಸದ ಸಿದ್ದರಾಮಯ್ಯನವರು, ವಿಧಾನಸಭೆಯ ಸ್ಪೀಕರ್ ಸ್ಥಾನ ನೀಡಿ, ಕಿಮ್ಮನೆ ರತ್ನಾಕರ ರವರಿಗೆ ಸಚಿವ ಸ್ಥಾನದ ಅವಕಾಶ ಕಲ್ಪಿಸಿದ್ದರು. ಇದು ಕಾಗೋಡುರವರ ಬೆಂಬಲಿಗರಲ್ಲಿ ತೀವ್ರ ನಿರಾಸೆ ಉಂಟು ಮಾಡಿತ್ತು. ಮತ್ತೊಂದೆಡೆ ಸ್ಪೀಕರ್‌ರವರು ವಿಧಾನಸಭೆ ಸೇರಿದಂತೆ ಇತರ ಸಭೆ-ಸಮಾರಂಭಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ಬಹಿರಂಗವಾಗಿಯೇ ಮುಖ್ಯಮಂತ್ರಿ ಹಾಗೂ ಸರಕಾರದ ಆಡಳಿತ ವೈಖರಿಯನ್ನು ಟೀಕಿಸುತ್ತಿದ್ದರು. ವಿರೋಧ ಪಕ್ಷಗಳ ನಾಯಕರ ರೀತಿಯಲ್ಲಿ ವಾಗ್ದಾಳಿ ನಡೆಸುತ್ತಿದ್ದರು. ಇದು ಮುಖ್ಯಮಂತ್ರಿ ಹಾಗೂ ಸಚಿವರನ್ನು ತೀವ್ರ ಇರುಸುಮುರಿಸಿಗೊಳಗಾಗುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಿಎಂರವರು ಕಾಗೋಡುರವರನ್ನು ತಮ್ಮ ಟೀಂಗೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಪಕ್ಷದದವರಿಮದಲೇ ಕೇಳಿ ಬರುತ್ತಿವೆ.
ವಿರೋಧ ಕಡಿಮೆ: ಸಚಿವ ಸಂಪುಟದಿಂದ ಕೈಬಿಡುವ ಚರ್ಚೆಗಳು ಬಂದಾಗಲೆಲ್ಲ, ಸಿಎಂ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಿರುತ್ತೇನೆ. ಸಿಎಂ ಸೂಚಿಸದರೆ ಈಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಕಿಮ್ಮನೆ ರತ್ನಾಕರ್‌ರವರು ಹೇಳುತ್ತಿದ್ದರು. ಕಿಮ್ಮನೆಯರವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದರೆ ಯಾವುದೇ ತೊಂದರೆ, ಭಿನ್ನಮತ ಎದುರಾಗುವುದಿಲ್ಲವೆಂಬುವುದನ್ನು ಅರಿತಿರುವ ಸಿದ್ದರಾಮಯ್ಯನವರು ಇಷ್ಟವಿಲ್ಲದಿದ್ದರೂ ಅವರನ್ನು ಕೈಬಿಟ್ಟು ಕಾಗೋಡು ತಿಮ್ಮಪ್ಪರಿಗೆ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆಂಬ ಮಾತು ಕೇಳಿಬರುತ್ತಿದೆ. ‘ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಾಚನೆಯ ಪ್ರಸ್ತಾಪವಾದಗಲ್ಲೆಲ್ಲ ಕಿಮ್ಮನೆ ರತ್ನಾಕರ್‌ರವರನ್ನು ಸಚಿವ ಸ್ಥಾನದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅವರ ಆಪ್ತರೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆ ಕಿಮ್ಮನೆ ರತ್ನಾಕರ್‌ರವರು ಸಚಿವ ಸ್ಥಾನದಲ್ಲಿ ಮುಂದುವರಿಯುತ್ತಾರಾ? ಕಾಗೋಡು ತಿಮ್ಮಪ್ಪಗೆ ಸಚಿವ ಸ್ಥಾನದ ಯೋಗ ಲಭ್ಯವಾಗಲಿದೆಯೇ? ಜಿಲ್ಲೆಯ ಇತರ ಶಾಸಕರಿಗೆ ಮಂತ್ರಿ ಭಾಗ್ಯ ದೊರಕಲಿದೆಯೇ? ಇಲ್ಲವೇ ಯಥಾಸ್ಥಿತಿ ಮುಂದುವರಿಯಲಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಕಾಂಗ್ರೆಸ್ ಪಾಳೇಯದಲ್ಲಿ ಮನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಾಗಿದೆ.