ಸಂಬಾರ ಬೆಳೆಗೆ ಆಧುನಿಕ ತಂತ್ರಜ್ಞ್ಞಾನದ ಅಗತ್ಯವಿದೆ: ಡಾ.ಹೋಮಿ ಚೆರಿಯನ್
ಶಿವಮೊಗ್ಗ, ಜೂ.16:ಸಂಬಾ ಬೆಳೆಯುವ ರೈತರಿಗೆ ನೂತನವಾಗಿ ಆವಿಷ್ಕೃತ ತಂತ್ರಜ್ಞಾನವನ್ನು ತಲುಪಿಸಿದಾಗ ಸಂಬಾರ ಬೆಳೆಗಳಲ್ಲಿ ಸಹಜವಾಗಿ ಉತ್ಪಾದನೆ ಹೆಚ್ಚಳವಾಗಲಿದೆ ಎಂದು ಕಲ್ಲಿಕೋಟೆ ಅಡಿಕೆ ಮತ್ತುಸಾಂಬಾರ ಬೆಳೆಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಹೋಮಿ ಚೆರಿಯನ್ ಹೇಳಿದರು.
ಅವರು ಕೃಷಿ ಮತ್ತು ತೋಟಗಾರಿಕೆ ವಿ.ವಿ. ಹಾಗೂ ಅಡಿಕೆ ಮತ್ತು ಸಂಬಾರ ಅಭಿವೃದ್ಧಿ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ನವಿಲೆಯ ಜೆಎನ್‌ಎನ್‌ಸಿಇ ಮಹಾವಿದ್ಯಾಲಯದ ಎಂಬಿಎ ಸಭಾಂಗಣದಲ್ಲಿ ಸಂಬಾರ ಬೆಳೆಗಳ ಉತ್ಪಾದನೆ, ಮಾರುಕಟ್ಟೆ ಮತ್ತು ವೌಲ್ಯವರ್ಧನೆ ಕುರಿತು ಏರ್ಪಡಿಸಿದ್ದ ರಾಜ್ಯಮಟ್ಟದ ಸಂಬಾರ ಬೆಳೆಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇತ್ತೀಚೆಗೆ ಸಂಬಾರ ಬೆಳೆಗಳ ಬೇಡಿಕೆ ಹೆಚ್ಚುತ್ತಿದೆ. ದೇಶದಲ್ಲಿ ಸಂಬಾರ ಪದಾರ್ಥ ಬೆಳೆಯುವ ರಾಜ್ಯಗಳಲ್ಲಿ ಅತಿ ಹೆಚ್ಚು ಸಂಬಾರ ಬೆಳೆಯುವ ರಾಜ್ಯ ಇದಾಗಿದ್ದರೂ ಮಾರುಕಟ್ಟೆಯ ಬೇಡಿಕೆಯಷ್ಟು ಉತ್ಪಾದನೆ ಸಾಧ್ಯವಾಗಿಲ್ಲ. ವಿಶ್ವವಿದ್ಯಾನಿಲಯಗಳು ಕಾಲಕಾಲಕ್ಕೆ ಸಂಶೋಧಿಸಿ, ಆವಿಷ್ಕರಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕೆಂದರು. ಪ್ರತಿವರ್ಷ ರಾಜ್ಯದಲ್ಲಿ ವೈವಿಧ್ಯ ಮಯ ಹವಾಗುಣ ಪ್ರದೇಶಗಳಲ್ಲಿ 16ಕ್ಕೂ ಹೆಚ್ಚಿನ ಸಂಬಾರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸಾಂಬಾರು ಬೆಳೆಯಲ್ಲಿ ಸುಧಾರಣೆ ಕಾಣಲಾಗಿದೆ. ರೈತರಲ್ಲಿ ಅರಿವು ಮೂಡಿಸುವ ಇಂತಹ ವಿಚಾರ ಸಂಕಿರಣಗಳು ಪೂರಕವಾತಾವರಣ ನಿರ್ಮಿಸಲಿದೆ. ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ಇಲಾಖಾ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಸ ಂಬಾರ ಬೆಳೆ ಬೆಳೆಯಲು ರಾಜ್ಯದಲ್ಲಿ ವಿಫುಲ ಅವಕಾಶಗಳಿದ್ದು, ವೈವಿಧ್ಯಮಯ ಸಂಬಾರ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು. ಉತ್ಪಾದಕರು ಮತ್ತು ಮಾರುಕಟ್ಟೆಯ ನಡುವೆ ಸಂಪರ್ಕ ಸೇತುವೆಯಾಗಿ ವಿವಿಗಳು ಕಾರ್ಯ ನಿರ್ವಹಿಸಬೇಕೆಂದು ಹೇಳಿದರು. ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಡಾ.ಸಿ. ವಾಸುದೇವಪ್ಪಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕೇಂದ್ರೀಯ ಪ್ಲಾಂಟೇಷನ್ ಸಂಶೋಧನಾ ಸಂಸ್ಥೆಯ ಡಾ.ಪಿ. ಚೌಡಪ್ಪ, ಕೃಷಿ ಮತ್ತು ತೋಟಗಾರಿಕೆ ವಿ.ವಿ.ಯ ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ನಾಯ್ಕೆ, ಡಾ.ಟಿ.ಎಚ್.ಗೌಡ, ಡಾ.ಜೆ.ವೆಂಕಟೇಶ್ ಉಪಸ್ಥಿತರಿದ್ದರು.