ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಪ್ರಯತ್ನಿಸಿ: ಶ್ರೀನಿವಾಸ್
ಸಾಗರ, ಜೂ.16: ಕಾಂಗ್ರೆಸ್ ಪಕ್ಷಕ್ಕೆ ಮುಖಂಡರು ಅನಿವಾರ್ಯವಲ್ಲ. ಕಾರ್ಯಕರ್ತರ ನೆಲೆ ಮೇಲೆ ನಿಂತಿರುವ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸದೃಢ ಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ತಿಳಿಸಿದ್ದಾರೆ.
ಇಲ್ಲಿನ ಬ್ರಾಸಂ ಸಭಾಂಗಣದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪಕ್ಷಕ್ಕಿಂತ ಯಾವುದೇ ವ್ಯಕ್ತಿ ಮುಖ್ಯವಲ್ಲ. ಕಾರ್ಯಕರ್ತರು ತಮಗಾದ ಸಮಸ್ಯೆಯನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಕಾರ್ಯಕರ್ತರ ಮನಸ್ಸಿಗೆ ನೋವು ಉಂಟು ಮಾಡಿದರೆ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಲಾಗಾಯ್ತಿನಿಂದ ಪಕ್ಷ ಸಂಘಟನೆಗೆ ತೊಡಗಿಕೊಂಡ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವತ್ತ ಗಮನ ಹರಿಸಲಾಗುತ್ತದೆ ಎಂದರು.
ಕಾಗೋಡು ತಿಮ್ಮಪ್ಪನವರು ಜನರಿಗೆ ಭೂಮಿಯ ಹಕ್ಕನ್ನು ಕೊಡಿಸುವ ನಿಟ್ಟಿನಲ್ಲಿ ನಿಷ್ಟುರವಾಗಿ ಕೆಲಸ ಮಾಡುತ್ತಿದ್ದಾರೆ. ಬಗರ್‌ಹುಕುಂ, ಅರಣ್ಯಹಕ್ಕು ಕಾಯ್ದೆ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಮುಂಚೂಣಿಯಲ್ಲಿದೆ. ಜನರಿಗೆ ಭೂಮಿಗಿಂತ ದೊಡ್ಡ ಆಸ್ತಿ ಯಾವುದೂ ಇಲ್ಲ. ಕಾಂಗ್ರೆಸ್ ಪಕ್ಷ ಭೂಮಿ ನೀಡುವ ಮಹತ್ವದ ಕೆಲಸ ಮಾಡುತ್ತಿದ್ದು, ಅದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಮ್ಮಿಂದಾಗಬೇಕು ಎಂದು ತಿಳಿಸಿದರು. ಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಟಿ. ತಿಮ್ಮಪ್ಪಮಾತನಾಡಿ, ಸಭೆಯಲ್ಲಿ ಕಾರ್ಯಕರ್ತರು ವ್ಯಕ್ತಪಡಿಸಿದ ಅಭಿಪ್ರಾಯ ಗಳನ್ನು ಕಾಗೋಡು ತಿಮ್ಮಪ್ಪಸೇರಿದಂತೆ ಹಿರಿಯ ಮುಖಂಡರ ಗಮನಕ್ಕೆ ತರಲಾಗುತ್ತದೆ. ತಾಲೂಕಿನಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು. ವೇದಿಕೆಯಲ್ಲಿ ನಗರ ಬ್ಲಾಕ್ ಅಧ್ಯಕ್ಷ ಮಕ್ಬೂಲ್ ಅಹ್ಮದ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್.ಚಂದ್ರಪ್ಪ, ನಗರಸಭೆ ಅಧ್ಯಕ್ಷ ಆರ್.ಗಣಾಧೀಶ್, ಪ್ರಮುಖರಾದ ರಾಮೆ ಗೌಡ, ವೈ.ಎಚ್.ನಾಗರಾಜ್, ಎನ್.ಜಿ.ಪೈ, ಮುಹಮ್ಮ್ಮದ್ ಖಾಸಿಮ್, ನಂದಾ ಗೊಜನೂರು, ವೀಣಾ ಬೆಳೆ ಯೂರು, ಅನಿತಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ಆಕ್ರೋಶ: ಸಭೆಯಲ್ಲಿ ತಾರಾಮೂರ್ತಿ, ಉಮೇಶ್ ಸೂರನಗದ್ದೆ, ಮೋಯಿದ್ದೀನ್ ಸಾಬ್ ಇನ್ನಿತರ ಪಕ್ಷಕ್ಕಾಗಿ ದುಡಿದವರಿಗೆ ಯಾವುದೇ ಹುದ್ದೆ ಕೊಟ್ಟಿಲ್ಲ. ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಬಂದವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿರುವುದು ಸರಿ ಯಲ್ಲ. ಇದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಿದ್ದು, ಇದನ್ನು ರದ್ದುಗೊಳಿಸಿ ಎಂದು ಒತ್ತಾಯಿಸಿದರು.