ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ ಹೆಕೋರ್ಟ್
ಬೆಂಗಳೂರು, ಜೂ.16: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದ್ದ 25 ದಿವಸದ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಮಗುವಿನ ತಂದೆ ಹಾಗೂ ತಾಯಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿತು. ಸರಕಾರದ ಪರ ವಾದಿಸಿದ ವಕೀಲರು, ತಾಯಿ ನಾಗರತ್ನಾ, ತಂದೆ ಶೇಖರ್ ಇಬ್ಬರು ಮಗುವಿನ ಉಸಿರಾಟಕ್ಕೆ ತೊಂದರೆ ಮಾಡಿ ಕೊಲೆ ಮಾಡಿದ್ದರೂ ಪುತ್ತೂರಿನ ನ್ಯಾಯಾಲಯ ಪೊಲೀಸರು ಪ್ರಾಸಿಕ್ಯೂಷನ್ ವರದಿಯನ್ನು ಸರಿಯಾಗಿ ಸಲ್ಲಿಸಿಲ್ಲ ಎಂದು ಅಭಿಪ್ರಾಯಿಸಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಾದಿಸಿದ ವಕೀಲರು, ಮಗುವನ್ನು ಬೇರೆಯವರು ತೆಗೆದುಕೊಂಡು ಹೋಗಿ ಸಾಕಲಿ ಎಂಬ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಜಾಗದಲ್ಲಿ ಮಲಗಿಸಿದ್ದರೇ ವಿನಃ ಕೊಲೆ ಮಾಡಲಿಕ್ಕೆ ಅಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ, ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆ, ತಲಾ ಒಂದು ಲಕ್ಷ ರೂ.ದಂಡ, ದಂಡ ಕಟ್ಟದಿದ್ದರೆ ಹೆಚ್ಚುವರಿಯಾಗಿ 3 ವರ್ಷ ಜೈಲು ಶಿಕ್ಷೆ ಎಂದು ಹೈಕೋರ್ಟ್ ಆದೇಶಿಸಿದೆ.