ಬೇವು ಲೇಪಿತ ಯೂರಿಯಾದಿಂದ ರೆತರಿಗೆ ಪ್ರಯೋಜನವಿಲ್ಲ
ಬೆಂಗಳೂರು, ಜೂ. 16: ಬೇವು ಲೇಪಿತ ಯೂರಿಯಾದಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಆದರೆ, ಕೇಂದ್ರ ಸರಕಾರ ಬೇವು ಲೇಪಿತ ಯೂರಿಯಾ ಉತ್ಪಾದನೆಯಲ್ಲಿ ಕ್ರಾಂತಿ ಮಾಡಲಾಗಿದೆ ಎಂಬ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಟೀಕಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ತಮ್ಮ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೇವು ಲೇಪಿತ ಯೂರಿಯಾ ಬಗ್ಗೆ ಸುದ್ದಿವಾಹಿನಿಗಳಲ್ಲಿ ಪ್ರತೀ ಎರಡು ನಿಮಿಷಗಲಿಕ್ಕೊಮ್ಮೆ ಪ್ರಸಾರ ಮಾಡಲಾಗುತ್ತಿದ್ದು, ರೈತರ ಸಬ್ಸಿಡಿ ಹಣವನ್ನು ಬಳಕೆ ಮಾಡಲಾಗುತ್ತಿದೆ ಎಂದು ದೂರಿದರು.
ನಾಲ್ಕೈದು ವರ್ಷಗಳ ಹಿಂದೆಯೇ ಯೂರಿಯಾ ಗೊಬ್ಬರಕ್ಕೆ ಬೇವು ಲೇಪನ ಪ್ರಕ್ರಿಯೆ ಆರಂಭವಾಗಿದ್ದು, ಇದೀಗ ಅದು ಪೂರ್ಣ ಪ್ರಮಾಣದಲ್ಲಿ ಆಗಿದೆ ಎಂದ ಅವರು, ಬೇವು ಲೇಪನದಿಂದ ಕೃಷಿಯೇತರ ಚಟುವಟಿ ಕೆಗಳಿಗೆ ಯೂರಿಯಾ ಬಳಕೆ ತಡೆಗಟ್ಟಲಾಗಿದೆ. ಇದರಿಂದ ರೈತರಿಗೆ ಏನೂ ಲಾಭವಾಗಿಲ್ಲ ಎಂದು ವಿಶ್ಲೇಷಿಸಿದರು.
ಭೂಮಿ ನೀಡಲು ಸಿದ್ಧ: ಉತ್ತರ ಕರ್ನಾಟಕ ಭಾಗದಲ್ಲಿ ರಸಗೊಬ್ಬರ ಕಾರ್ಖಾನೆ ಆರಂಭಿಸಲು ಅಗತ್ಯ ಭೂಮಿ ನೀಡಲು ರಾಜ್ಯ ಸರಕಾರ ಸಿದ್ಧವಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಪತ್ರ ಬರೆದು ಭೂಮಿ ನೀಡುವ ಭರವಸೆ ನೀಡಿದ್ದಾರೆ. ಆದರೂ, ಕೇಂದ್ರ ಸಚಿವರು ರಾಜ್ಯ ಸರಕಾರದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆಂದು ಅವರು ದೂರಿದರು.
ಮಾರುಕಟ್ಟೆ ವ್ಯವಸ್ಥೆಗೆ ಆದ್ಯತೆ: ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ವಿಶೇಷ ಆದ್ಯತೆ ನೀಡಲಾಗಿದೆ. ಎರಡು ವರ್ಷಗಳಲ್ಲಿ 63 ಸಾವಿರ ಹೆಕ್ಟೇರ್ ಭೂಮಿಯನ್ನು ಸಾವಯವ ಕೃಷಿಗೆ ಒಳಪಡಿಸಲಾಗಿದೆ. ಕೆಎಂಎಫ್ ಮಾದರಿಯಲ್ಲೇ ರೈತರ ಒಕ್ಕೂಟ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಹೊಂಡ: ಒಣಭೂಮಿ ಬೇಸಾಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ‘ಕೃಷಿಭಾಗ್ಯ’ ಯೋಜನೆಯಡಿ ಕೃಷಿ ಹೊಂಡ ತೆಗೆಸಲು ರೈತರಿಗೆ ನೆರವು ನೀಡುತ್ತಿದ್ದು, ಪ್ರಸಕ್ತ ಮುಂಗಾರು ಅವಧಿಗೆ ರಾಜ್ಯದಲ್ಲಿ 1ಲಕ್ಷ ಕೃಷಿ ಹೊಂಡಗಳು ನಿರ್ಮಾಣ ಆಗಲಿವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆ ನಷ್ಟಕ್ಕೆ ಒಟ್ಟು 3,100 ಕೋಟಿ ರೂ.ಪರಿಹಾರ ನೀಡಿದ್ದು, ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಹೆಚ್ಚು ಮೊತ್ತದ ಪರಿಹಾರವನ್ನು ಸಮರ್ಪಕವಾಗಿ ರೈತರಿಗೆ ವಿತರಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
‘ಫಸಲ್ ಬಿಮಾ’ಗೆ ಚಾಲನೆ: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಇದಕ್ಕೆ 670 ಕೋಟಿ ರೂ.ಗಳನ್ನು ಮೀಸಲಿರಿಸ ಲಾಗಿದೆ. ಶೇ.25ರಷ್ಟು ರೈತರನ್ನು ಕೃಷಿ ಬೆಲೆ ವಿಮಾ ಯೋಜನೆಗೆ ಒಳಪಡಿಸಲು ಉದ್ದೇಶಿಸಲಾಗಿದೆ ಎಂದರು.