ಕೃಷಿ ಖಾತೆ ಸಿಕ್ಕಿರುವುದು ನನ್ನ ಸೌಭಾಗ್ಯ
ಬೆಂಗಳೂರು, ಜೂ. 16: ‘ಖಾತೆ ಬದಲಾವಣೆಗೆ ಅರ್ಜಿ ಹಾಕುವ ವ್ಯಕ್ತಿ ತಾನಲ್ಲ. ರಾಜ್ಯದ ರೈತರಿಗೆ ಸೇವೆ ಸಲ್ಲಿಸುವ ಉತ್ತಮ ಅವಕಾಶ ತನಗೆ ಸಿಕ್ಕಿದ್ದು, ಕೃಷಿ ಖಾತೆ ದೊರೆತಿರುವುದು ನನ್ನ ಸೌಭಾಗ್ಯ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರಿಗಾಗಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಸಚಿವ ಸಂಪುಟ ಸ್ಥಾನವನ್ನೇ ನೀಡಬೇಕೆಂದು ತಾನೇನು ಬೇಡಿಕೆಯಿಟ್ಟಿಲ್ಲ, ಮುಂದೆಯೂ ಇಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಿಎಂ ಸಿದ್ಧರಾಮಯ್ಯ, ನನಗೆ ನೀಡಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದು, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದು, ಬೇರೆ ಚಟುವಟಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ದಿಲ್ಲಿಗೆ ಹೋಗಿದ್ದು ನಿಜ: ಎರಡು ದಿನಗಳ ಹಿಂದೆಯೆಷ್ಟೇ ಹೊಸದಿಲ್ಲಿಗೆ ಹೋಗಿದ್ದು ನಿಜ. ಸಂಪುಟ ವಿಸ್ತರಣೆ ಮಾತ್ರವಲ್ಲದೆ, ಪಕ್ಷ ಸಂಘಟನೆ ಸೇರಿದಂತೆ ರಾಷ್ಟ್ರೀಯ ವಿಚಾರಗಳ ಬಗ್ಗೆಯೂ ಚರ್ಚೆ ಹಾಗೂ ವಿಚಾರ ವಿನಿಮಯಕ್ಕೆ ಹೊಸದಿಲ್ಲಿಗೆ ತೆರಳಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದರು.
ಪುನಾರಚನೆ ನಿಶ್ಚಿತ: ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಬಹುತೇಕ ಸಚಿವರು ಹೊಸದಿಲ್ಲಿಗೆ ತೆರಳಿದ್ದು, ತಾನೂ ಹೊಸದಿಲ್ಲಿಗೆ ತೆರಳಲಿದ್ದೇನೆ. ಶನಿವಾರ ಅಥವಾ ಸೋಮವಾರದೊಳಗೆ ಸಚಿವ ಸಂಪುಟ ಪುನಾರಚನೆ ಆಗುವುದು ನಿಶ್ಚಿತ ಎಂದು ಅವರು ಇದೇ ವೇಳೆ ಭರವಸೆ ನೀಡಿದರು.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಕೆಲವರನ್ನು ಕೈಬಿಟ್ಟು, ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ. ಕೆಲವರ ಖಾತೆಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿದ್ದು, ವಿಧಾನಮಂಡಲ ಅಧಿವೇಶನಕ್ಕೆ ಹೊಸಬರು ಸಚಿವರಾಗಲಿದ್ದಾರೆ ಎಂದು ಹೇಳಿದರು.