ಇಂಗ್ಲೀಷ್ ಏಕಾಧಿಪತ್ಯದಿಂದ ದೇಶಿ ಭಾಷೆಗಳ ಸ್ಥಾನ ಪಲ್ಲಟ

Update: 2016-06-16 18:27 GMT

 ಬೆಂಗಳೂರು, ಜೂ.16: ರಾಜ್ಯದಲ್ಲಿನ ವಿಶ್ವವಿದ್ಯಾನಿಲಯ ಹಾಗೂ ಪದವಿ ಕಾಲೇಜುಗಳಲ್ಲಿನ ಬಹುತೇಕ ಪ್ರಾಧ್ಯಾಪಕರಿಗೆ ಹಳಗನ್ನಡ ಕೃತಿಗಳನ್ನು ಅಭ್ಯಾಸ ಮಾಡಿ ಬೋಧಿಸಲು ಬರುವುದಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಕಸಾಪದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ ಹಾಗೂ ನಿವೃತ್ತ ಅಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
 
 ಯಾವುದೇ ಭಾಷೆಯಾಗಲಿ ನಿರಂತರ ಬಳಕೆ ಮತ್ತು ಪರಿಶ್ರಮದಿಂದ ತನ್ನತನವನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಭಾಷೆಯ ಮೂಲ ಸೌಂದರ್ಯವನ್ನು ಆಸ್ವಾದಿಸಿ ಪಾಠ ಮಾಡಲು ಅಸಾಧ್ಯ. ಆದುದರಿಂದಲೇ ಇಂದು ನಿರಂತರ ಬಳಕೆ ಇಲ್ಲದ ಕಾರಣ ಸಂಸ್ಕೃತ, ಹಳಗನ್ನಡ ಭಾಷೆಗಳು ಅಳಿವಿನ ಅಂಚಿಗೆ ತಲುಪಿವೆ. ಹೀಗಾಗಿ ವಿಶ್ವ ವಿದ್ಯಾನಿಲಯ ಹಾಗೂ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಹಳಗನ್ನಡ ಹಾಗೂ ಸಂಸ್ಕೃತವನ್ನು ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಹಳ ಹಿಂದಿನ ದಿನಗಳಲ್ಲಿ ಸಂಸ್ಕೃತವನ್ನು ಅಭ್ಯಾಸ ಮಾಡುತ್ತಿದ್ದವರೆಲ್ಲ ಇಂದು ಇಂಗ್ಲಿಷ್ ಭಾಷೆಯ ಮೊರೆ ಹೋಗಿರುವುದರ ಪರಿಣಾಮ ಸಂಸ್ಕೃತ ಭಾಷೆಯೆ ಮರೆಯಾಗುತ್ತಿದ್ದು, ಇದೀಗ ಹಳಗನ್ನಡವೂ ಸೇರಿಕೊಂಡಿದೆ. ಒಂದು ಕಡೆ ದೇಶಿ ಭಾಷೆಗಳು ನೆಲೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿಯೇ ಪದವಿ ಪಠ್ಯಗಳಲ್ಲಿ ಹಳಗನ್ನಡ ಪಾಠಗಳು ಬೇಡ ಎಂದು ಪಠ್ಯಪುಸ್ತಕ ಸಮಿತಿ ತೀರ್ಮಾನ ಮಾಡುವ ಹಂತಕ್ಕೆ ಬಂದಿರುವುದು ದುರದುಷ್ಟಕರ ಸಂಗತಿ ಎಂದು ಹೇಳಿದರು. ಸಂಸ್ಕೃತದಲ್ಲಿರುವ ಸಂಪ್ರದಾಯ ಪದ್ಧತಿಗಳು, ಮಂತ್ರಗಳು, ಸ್ತೋತ್ರಗಳನ್ನು ನೋಡಿ ಅದು ಬ್ರಾಹ್ಮಣರಿಗೆ ಸೀಮಿತವಾದ ಭಾಷೆ ಎಂಬ ಭಾವನೆ ಮೂಡುತ್ತದೆ. ಆದರೆ, ಇದಿಷ್ಟೇ ಸಂಸ್ಕೃತ ಭಾಷೆಯಲ್ಲ. ಸಂಸ್ಕೃತ 500 ವರ್ಷಗಳ ಹಿಂದೆ ರಾಜ್ಯದಲ್ಲಿ ಆಡಳಿತ ಭಾಷೆಯಾಗಿ, ವಿದ್ವಾಂಸರ ಭಾಷೆಯಾಗಿ, ಶಾಸ್ತ್ರ ಮತ್ತು ಪೌರೋಹಿತ್ಯ ಭಾಷೆಯಾಗಿತ್ತು. ಕಾಲ ಕ್ರಮೇಣ ಬದಲಾದಂತೆ ಭಾಷೆಗಳು ಬದಲಾದ ಹಿನ್ನೆಲೆಯಲ್ಲಿ ಅದು ವಿದ್ವಾಂಸ ಭಾಷೆಯಾಗಿ ಮಾತ್ರ ಉಳಿದುಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಕೆ.ವಿ.ರಾಮಕೃಷ್ಣಮಾಚಾರ್ಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವೈ.ಎಸ್.ಸಿದ್ದೇಗೌಡ ಉಪಸ್ಥಿತರಿದ್ದರು. ಇದೇ ವೇಳೆಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಧ್ಯಾಪಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News