×
Ad

ಭಟ್ಕಳ: ನಮಾಝ್ ಗೆ ತೆರಳಿದ್ದ ವೇಳೆ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

Update: 2016-06-17 21:22 IST

ಭಟ್ಕಳ, ಜೂ.17: ಈಗ ಪ್ರಾರ್ಥನೆಗೆಂದು ಮನೆಯಿಂದ ಹೊರ ಹೋಗಬೇಕಾದರೂ ಯೋಚಿಸಬೇಕಾದ ಪೀಕಲಾಟ ಭಟ್ಕಳದ ನಾಗರಿಕರಿಗೆ ಎದುರಾಗಿದೆ. ರಾತ್ರಿ ಸುಮಾರು 9 ಗಂಟೆ ವೇಳೆಗೆ ರಮಝಾನ್ ವಿಶೇಷ ಪ್ರಾರ್ಥನೆಗೆಂದು ಮನೆಗೆ ಬೀಗ ಹಾಕಿ ತೆರಳಿದ್ದ ವೇಳೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದಾರೆ. ಭಟ್ಕಳದ ಜಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸೈಯದ್ ಫಾರೂಕ್ ಎಂಬವರ ಮನೆಯಲ್ಲಿ ಕಳ್ಳತನ ಸಂಭವಿಸಿದೆ.

ರಮಝಾನ್ ಪ್ರಾರ್ಥನೆಗಾಗಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ ಸಮಯವನ್ನು ಸಾಧಿಸಿ ಬಲವಂತವಾಗಿ ಬಾಗಿಲನ್ನು ಮುರಿದು ನುಗ್ಗಿದ ಕಳ್ಳರು ಸುಮಾರು ಇಪ್ಪತ್ತೈದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಐದು ಲಕ್ಷ ರೂ.ನಗದು ಕದ್ದೊಯ್ದಿದ್ದಾರೆ. ಅಮೂಲ್ಯ ವಸ್ತುಗಳನ್ನು ಮನೆಯ ಕಪಾಟಿನ ಲಾಕರ್ನಲ್ಲಿಟ್ಟಿದ್ದರೂ ಈ ಲಾಕರುಗಳನ್ನು ಮುರಿದು ದರೋಡೆ ಮಾಡಲಾಗಿದೆ.

ಅತ್ಯಂತ ತರಾತುರಿಯಲ್ಲಿ ಈ ಕಾರ್ಯ ನಡೆದಿದ್ದು ಮನೆಯ ವಸ್ತುಗಳೆಲ್ಲವೂ ಚಿಲ್ಲಾಪಿಲ್ಲಿಯಾಗಿವೆ. ಅಚ್ಚರಿಯ ವಿಷಯವೆಂದರೆ ಯಾವ ಕೋಣೆಯಲ್ಲಿ ಚಿನ್ನಾಭರಣಗಳಿತ್ತೋ ಆ ಕಪಾಟನ್ನೇ ಹುಡುಕಿ ಒಡೆದಿರುವುದು ಕಂಡುಬಂದಿದ್ದು, ಈ ಬಗ್ಗೆ ತಿಳಿದಿದ್ದವರೇ ಕೃತ್ಯ ಎಸಗಿರುವ ಗುಮಾನಿ ವ್ಯಕ್ತವಾಗಿದೆ. 

ವಿದೇಶದಲ್ಲಿ ನೆಲೆಸಿದ್ದ ಸೈಯದ್ ಫಾರೂಖ್ ಅಂಬಾರಿ ಇತ್ತೀಚೆಗಷ್ಟೇ ವಿದೇಶದಿಂದ ಆಗಮಿಸಿದ್ದು, ಶಾಶ್ವತವಾಗಿ ನೆಲೆಸಲು ಭಟ್ಕಳಕ್ಕೆ ಆಗಮಿಸಿದ್ದರು. ಮನೆಯಲ್ಲಿ ಇವರ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು ಎಲ್ಲರೂ ಆ ಸಮಯದಲ್ಲಿ ವಿಶೇಷ ಪ್ರಾರ್ಥನೆಗಾಗಿ ಮಸೀದಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಕೆಲ ಸಮಯದ ಹಿಂದೆ ಮನೆಯ ಮುಂಬಾಗಿಲಿನ ಬೀಗ ಹಾಳಾಗಿದ್ದು ಇವರು ನೆರೆಯವರಿಂದ ಬೀಗವೊಂದನ್ನು ಎರವು ಪಡೆದಿದ್ದರು. ಆ ಸಮಯದಲ್ಲಿ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳ ಬಗ್ಗೆ ಯಾವುದೋ ಸುಳಿವು ಸಿಕ್ಕ ದುರುಳರು ಮನೆಯವರು ಇಲ್ಲದ ಸಂದರ್ಭವನ್ನೇ ಕಾಯುತ್ತಿದ್ದು ಮಸೀದಿಗೆ ತೆರಳಿದ್ದ ವೇಳೆಯನ್ನು ಕಳ್ಳತನಕ್ಕಾಗಿ ಬಳಸಿಕೊಂಡಿದ್ದಾರೆ.

ಭಟ್ಕಳ ಸಿಪಿಐ ಪ್ರಶಾಂತ್ ನಾಯಕ್, ಪಿಎಸೈ ರೇವತಿ ಮತ್ತು ಇತರ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕೆ್ಕ ಆಗಮಿಸಿ ಪರಿಶೀಲನೆ ನಡೆಸಿದರು. ಹೆಚ್ಚಿನ ತನಿಖೆಗಾಗಿ ಬೆರಳಚ್ಚು ತನಿಖಾ ದಳವನ್ನು ಕರೆಸಲಾಗಿದ್ದು ತನಿಖೆ ಮುಂದುವರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News