ಬೂತ್ ಮಟ್ಟದಿಂದಲೇ ಮಹಿಳಾ ಕಾಂಗ್ರೆಸ್ ಸಂಘಟನೆ: ಕುಮುದಾ
ಮಡಿಕೇರಿ, ಜೂ.17: ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಘಟಕವನ್ನು ಬೂತ್ ಮಟ್ಟದಿಂದಲೇ ಸಂಘಟಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಬಲವರ್ಧನೆಗೊಳಿಸಲಾಗುವುದೆಂದು ಘಟಕದ ಜಿಲ್ಲಾಧ್ಯಕ್ಷೆ ಕುಮುದಾ ಧರ್ಮಪ್ಪತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಕಾಂಗ್ರೆಸ್ ನಿರ್ಣಾಯಕ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದ್ದು, ಮಹಿಳಾ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಕರೆ ನೀಡಿದರು. ಬೂತ್ ಮಟ್ಟದಲ್ಲಿ ಪಕ್ಷದ ಮಹಿಳಾ ಸಮಿತಿಗಳನ್ನು ರಚಿಸುವುದಕ್ಕಾಗಿ ಸದ್ಯದಲ್ಲಿಯೇ ಜಿಲ್ಲಾ ವ್ಯಾಪಿ ಪ್ರವಾಸ ಕೈಗೊಳ್ಳಲಾಗುವುದು. ಮಹಿಳಾ ಕಾಂಗ್ರೆಸಿಗರನ್ನು ಭೇಟಿಯಾಗಿ ಪಕ್ಷ ಸಂಘಟನೆ ಕುರಿತು ಚರ್ಚಿಸಲಾಗುವುದು. ಸರಕಾರದ ಸೌಲಭ್ಯಗಳನ್ನು ಕಾರ್ಯಕರ್ತರ ಮೂಲಕ ಮಹಿಳೆಯರಿಗೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಕುಮುದಾ ಧರ್ಮಪ್ಪ ತಿಳಿಸಿದರು.
ಸಭೆಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಕೆ.ಕೆ.ಮಂಜುನಾಥ್ ಕುಮಾರ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಎಂ.ಗಣೇಶ್, ಪ್ರ.ಕಾರ್ಯದರ್ಶಿ ವಿ.ಪಿ.ಸುರೇಶ್, ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ, ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಝುಲೇಕಾಬಿ, ಉಪಾಧ್ಯಕ್ಷೆ ಲೀಲಾಶೇಷಮ್ಮ, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಪುಟ್ಟಲಕ್ಷ್ಮೀ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷೆ ಪ್ರೇಮಾಕೃಷ್ಣಪ್ಪ, ಮಹಿಳಾ ಕಾಂಗ್ರೆಸ್‌ನ ಮಡಿಕೇರಿ ಬ್ಲಾಕ್ ಅಧ್ಯಕ್ಷೆ ಮೀನಾಕ್ಷಿ ಕೇಶವ, ವೀರಾಜಪೇಟೆ ಅಧ್ಯಕ್ಷ ರಾಣು ಮಂದಣ್ಣ, ಸೋಮವಾರಪೇಟೆ ಅಧ್ಯಕ್ಷೆ ಸಲೀನಾ ಪೇದ್ರು, ನಾಪೋಕ್ಲು ಅಧ್ಯಕ್ಷೆ ರಾಣಿಗಣಪತಿ ಹಾಗೂ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಮೀಳಾ ಉಪಸ್ಥಿತರಿದ್ದರು.