ಸ್ವಚ್ಛ ಪರಿಸರದಿಂದ ಮಾತ್ರ ಸದೃಢ ಆರೋಗ್ಯ ಸಾಧ್ಯ: ಜಗದೀಶ
ಶಿಕಾರಿಪುರ, ಜೂ. 17: ಸ್ವಚ್ಛ ಪರಿಸರದಿಂದ ಮಾತ್ರ ಸದೃಢ ಆರೋಗ್ಯ ಸಾಧ್ಯವಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರೂ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಸಂಪೂರ್ಣ ಸಮಾಜದ ಆರೋಗ್ಯವನ್ನು ಕಾಪಾಡುವಂತೆ ಪುರಸಭೆಯ ಉಪಾಧ್ಯಕ್ಷ ಜಗದೀಶ ತಿಳಿಸಿದರು.
ಪುರಸಭೆ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಜಯನಗರದಲ್ಲಿ ಗುರುವಾರ ನಡೆದ ಸ್ವಚ್ಛತಾ ಆಂದೋಲನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛತೆಯಿಂದ ಮಾತ್ರ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯ ಎಂದ ಅವರು, ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದಲ್ಲಿ ಸಂಪೂರ್ಣ ಬಡಾವಣೆ ಸ್ವಚ್ಛವಾಗಿ ಬಡಾವಣೆಯ ಜನತೆಯು ಆರೋಗ್ಯದಿಂದಿರಲು ಸಾಧ್ಯ ಎಂದರು.
ಪುರಸಭಾ ಸದಸ್ಯ ಟಿ.ಎಸ್ ಮೋಹನ್ ಮಾತನಾಡಿ, ಮನೆಯಿಂದ ಸ್ವಚ್ಛತೆಯನ್ನು ಆರಂಭಿಸಿ ಕ್ರಮೇಣ ಬಡಾವಣೆಯ ಸ್ವಚ್ಛತೆಯ ಬಗ್ಗೆ ಗಮನ ಹರಿಸಿದಾಗ ಮಾತ್ರ ದೇಶದ ಸ್ವಚ್ಛತೆಯನ್ನು ಕಾಪಾಡಬಹುದಾಗಿದೆ ಎಂದ ಅವರು, ಸ್ವಚ್ಛತೆಯಿಂದ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂಬ ಗುಟ್ಟನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಶಬನಾಬಾನು, ಆರೋಗ್ಯ ಶಿಕ್ಷಣಾಧಿಕಾರಿ ಎಂ.ವೈ ಪೂಜಾರ್, ಪುರಸಭೆಯ ಆರೋಗ್ಯ ನಿರೀಕ್ಷಕ ರಾಜ್ ಕುಮಾರ್, ನವೀನ, ಶ್ರೀನಿವಾಸ್, ಆರೋಗ್ಯ ಇಲಾಖೆಯ ಪಾಂಡು, ಸುರೇಶ ಶೆಟ್ಟಿ, ಎಲಿಝಬೆತ್, ತಿಮ್ಮಾರೆಡ್ಡಿ, ಬಾಲರಾಜ್, ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.