ವಿದ್ಯಾರ್ಥಿಗಳಿಗೆ ನೋಟ್‌ಬುಕ್,ಲೇಖನ ಸಾಮಗ್ರಿ ವಿತರಣೆ
ಶಿವಮೊಗ್ಗ, ಜೂ.17: ತಾಲೂಕಿನ ಕುಂಸಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಶುಕ್ರವಾರ ಬೆಂಗಳೂರಿನ ಗುತ್ತಿಗೆದಾರ ಆರ್.ಚಂದ್ರು ಕುಟುಂಬದವರು ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದರು. ಕುಂಸಿ ಸುತ್ತಮುತ್ತಲಿನ ಕಿರಿಯ, ಹಿರಿಯ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ ಸೇರಿದಂತೆ 9 ಶಿಕ್ಷಣ ಸಂಸ್ಥೆಗಳ 2,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೋಟ್‌ಬುಕ್,ಲೇಖನ ಸಾಮಗ್ರಿ ವಿತರಣೆ ಮಾಡಲಾಯಿತು. ಸಮಾರಂಭವನ್ನು ತಾಲೂಕು ಪಂಚಾಯತ್ ಸದಸ್ಯ ಮಂಜುನಾಥ್ ಉದ್ಘಾಟಿಸಿ ಮಾತನಾಡಿ, ಕುಂಸಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಆರ್.ಚಂದ್ರುರವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಆದರೆ ಹುಟ್ಟಿದ ಊರನ್ನು ಮರೆಯದ ಅವರು, ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ನೋಟ್‌ಬುಕ್-ಲೇಖನ ಸಾಮಗ್ರಿ ವಿತರಣೆ ಮಾಡುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ. ಇದು ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೂಲತಃ ಕುಂಸಿ ಗ್ರಾಮದವರಾದ ಶಿವಮೊಗ್ಗ ನಗರದ ಖ್ಯಾತ ಹೊಟೇಲ್ ಉದ್ಯಮಿ ಎನ್.ರಾಜೇಂದ್ರರವರು ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಆರ್.ಚಂದ್ರುರವರು ತಮ್ಮ ಬಾಲ್ಯ ಸ್ನೇಹಿತರಾಗಿದ್ದರು. ಆದರೆ ಅವರು ಬಡತನದ ಹಿನ್ನೆಲೆಯಲ್ಲಿ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಇದೀಗ ಜೀವನದಲ್ಲಿ ಉತ್ತಮ ಸಾಧನೆ ಮಾಡಿರುವ ಅವರು, ತಮ್ಮಂತೆ ತಮ್ಮ ಗ್ರಾಮದ ಮಕ್ಕಳು ಬಡತನದ ಕಾರಣದಿಂದ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಬಾರದೆಂಬ ಉದ್ದೇಶದಿಂದ ಪ್ರತಿವರ್ಷ ಗ್ರಾಮದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್, ಲೇಖನ ಸಾಮಗ್ರಿ ವಿತರಣೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಅಭಿನಂದನೀಯ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಕುಂಸಿ ಗ್ರಾಪಂ ಅಧ್ಯಕ್ಷೆ ರವಿಕಲಾ ಉಡ್ಡಪ್ಪ, ಉಪಾಧ್ಯಕ್ಷ ಕೆ.ಜಿ.ಸುರೇಶ್‌ಗೌಡ, ಸದಸ್ಯೆ ಶಾರದಾ ರಂಗನಾಥ್, ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಾಬಾಯಿ, ಯುವ ಮುಖಂಡರಾದ ರಾಘವೇಂದ್ರ, ಪ್ರದೀಪ್, ಮನೀಷ್, ಪ್ರವೀಣ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.