ಕುಡಿಯುವ ನೀರಿನ ಸಮಸ್ಯೆ: ಪ್ರತಿಭಟನೆಗೆ ಸಿದ್ಧತೆ
ಮೂಡಿಗೆರೆ, ಜೂ.17: ಕುಡಿಯುವ ನೀರಿಗೆ ಪರದಾಡುತ್ತಿರುವ ಮಾರ್ಕೆಟ್ ಬಡಾವಣೆಯ ನಿವಾಸಿಗಳು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ರವರಿಗೆ ಖಾಲಿ ಕೊಡ ಪ್ರದರ್ಶನ ನಡೆಸಲು ಸಿದ್ಧ್ದತೆ ನಡೆಸಿ, ಬಳಿಕ ಶಾಸಕರ ಮಧ್ಯ ಪ್ರವೇಶದಿಂದ ಪ್ರತಿಭಟನೆಯನ್ನು ಮುಂದೂಡಿರುವುದಾಗಿ ಮಾರ್ಕೆಟ್ ಬಡಾವಣೆಯ ನಿವಾಸಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಾರ್ಕೆಟ್ ರಸ್ತೆ ಬಡಾವಣೆಗೆ ಕುಡಿಯುವ ನೀರು ಪೂರೈಸಲು ಪಟ್ಟಣ ಪಂಚಾಯತ್ ಆಡಳಿತವು ಸಂಪೂರ್ಣ ವಿಫಲವಾಗಿದೆ.ನೀರು ಪೂರೈಸಲು ಹೇಳಿದರೆ ವಿದ್ಯುತ್ ಅಭಾವದ ಇಲ್ಲವೇ ಬೇರೆ ಸಬೂಬು ಹೇಳಿಕೊಳ್ಳುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಜನರು ನೀರಿಲ್ಲದೇ ಪರದಾಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಶುಕ್ರವಾರ ಮಾರ್ಕೆಟ್ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ ಉದ್ಘಾಟನೆಗೆ ಗೃಹ ಸಚಿವರು ಬರುವ ಸಾಧ್ಯತೆ ಇದ್ದಿದ್ದರಿಂದ ಅವರೆದುರು ಖಾಲಿ ಕೊಡ ಪ್ರದರ್ಶಿಸಲು ಸ್ಥಳೀಯ ನಿವಾಸಿಗಳು ಮುಂದಾಗಿದ್ದರು.
ಇದನ್ನು ತಿಳಿದ ಬೆಂಗಳೂರಿನಲ್ಲಿದ್ದ ಶಾಸಕ ಬಿ.ಬಿ.ನಿಂಗಯ್ಯರವರು ಸ್ಥಳೀಯ ನಿವಾಸಿ ಕರ್ನಾಟಕ ಬ್ಯಾರಿ ಅಕಾಡಮಿ ಸದಸ್ಯ ಕಿರುಗುಂದ ಅಬ್ಬಾಸ್‌ರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ಜರಗಿಸಲು ಸಂಬಂಧಿಸಿದವರಿಗೆ ಸೂಚನೆ ನೀಡುವ ಭರವಸೆ ನೀಡಿದರು.ಈ ಹಿನ್ನೆಲೆಯಲ್ಲಿ ಜೂ.18ರೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಡದಿದ್ದರೆ ಪಪಂ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡುವ ಮೂಲಕ ಸ್ಥಳೀಯರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
ಇದಾದ ಕೆಲವೇ ಹೊತ್ತಿನಲ್ಲಿ ಶಾಸಕರ ಸೂಚನೆಯ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಅಧಿಕಾರಿಗಳು ಮಾರ್ಕೆಟ್ ಬಡಾವಣೆಯ ಜನರ ಅನುಕೂಲಕ್ಕಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದರು.ಈ ವೇಳೆ ಖಾಲಿ ಕೊಡ ಪ್ರದರ್ಶನಕ್ಕೆ ಸಜ್ಜ್ಜಾಗಿದ್ದ ಕೊಡಗಳಲ್ಲಿ ನೀರು ತುಂಬಿಸಲಾಯಿತು.