×
Ad

‘ಬೆಂಗಳೂರಲ್ಲಿ ಮಿನಿಸ್ಟರ್; ಸಾಗರದಲ್ಲಿ ಸ್ಪೀಕರ್’

Update: 2016-06-17 23:27 IST

ಶಿವಮೊಗ್ಗ, ಜೂ. 17: ಸಚಿವ ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿರುವುದು, ರಾಜ್ಯ ಸರಕಾರದಲ್ಲಿ ಸಂಚಲನ ಮೂಡಿಸಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಅನುಮತಿ ಪಡೆಯಲು ರಾಷ್ಟ್ರ ರಾಜಧಾನಿ ದಿಲ್ಲಿಗೆ ದೌಡಾಯಿಸಿದ್ದಾರೆ. ಈ ನಡುವೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು, ಸಚಿವ ಸ್ಥಾನ ಕೈತಪ್ಪುವ ಆತಂಕದಲ್ಲಿರುವ ಕೆಲ ಸಚಿವರು ಕೂಡ ದಿಲ್ಲಿಗೆ ತೆರಳಿ ಲಾಬಿ ನಡೆಸಲಾರಂಭಿಸಿದ್ದಾರೆ. ಪ್ರಭಾವಿ ನಾಯಕರ ಮೇಲೆ ಹೈಕಮಾಂಡ್ ಮೇಲೆ, ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಪಕ್ಷದ ಮೂಲಗಳಿಂದ ಕೇಳಿ ಬರುತ್ತಿವೆ. ಸಚಿವ ಸ್ಥಾನ ಕೈ ತಪ್ಪಲಿದೆ ಎಂದು ಹೇಳಲಾಗುತ್ತಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಹಾಗೂ ಸಚಿವ ಸಂಪುಟ ಸೇರಲಿದ್ದಾರೆ ಎಂದು ಹೇಳಲಾಗುತ್ತಿರುವ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ದಿಲ್ಲಿಯತ್ತ ಮುಖ ಮಾಡಿಲ್ಲ. ಈ ಇಬ್ಬರು ನಾಯಕರು ಯಾವುದೇ ಲಾಬಿ ಮಾಡುವ ಗೋಜಿಗೆ ಹೋಗದೆ ತಮ್ಮ ಪಾಡಿಗೆ ಆರಾಮಾಗಿದ್ದಾರೆ ಎಂದು ಕಾಂಗ್ರೆಸ್‌ನ ಆಪ್ತರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

  ಖರ್ಗೆ ಬೆಂಬಲ: ಕಾಗೋಡು ತಿಮ್ಮಪ್ಪರವರ ಪರವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಬ್ಯಾಟಿಂಗ್ ನಡೆಸುತ್ತಿದ್ದಾರೆ. ಶತಾಯಗತಾಯ ಪ್ರಸ್ತುತ ಸಂಪುಟ ಪುನಾರಚನೆಯಲ್ಲಿ ಕಾಗೋಡು ತಿಮ್ಮಪ್ಪರಿಗೆ ಅವಕಾಶ ಕಲ್ಪಿಸಬೇಕೆಂದು ಸಿಎಂ ಸಿದ್ದರಾಮಯ್ಯರಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ ಎನ್ನಲಾಗುತ್ತಿದ್ದು, ದಿಲ್ಲಿಯ ವರಿಷ್ಠರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಮಾಹಿತಿ ನೀಡುತ್ತವೆ. ಉದ್ದೇಶಪೂರ್ವಕವಾಗಿಯೇ ಕಾಗೋಡುರವರನ್ನು ಸಚಿವ ಸಂಪುಟದಿಂದ ದೂರವಿಟ್ಟು, ಅವರ ಕೋಪತಾಪಕ್ಕೆ ತುತ್ತಾಗುತ್ತಿರುವ ಸಿಎಂ ಸಿದ್ದರಾಮಯ್ಯ ಕೂಡ ಕಾಗೋಡುರವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ತಮ್ಮ ನಂಬಿಕಸ್ಥ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ‘ಕಿಮ್ಮನೆಯವರನ್ನು ಸಚಿವ ಸ್ಥಾನದಿಂದ ಕೈಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸುತರಾಂ ಇಷ್ಟವಿಲ್ಲವಾಗಿದೆ. ಅವರ ಸಚಿವ ಸಂಪುಟದಲ್ಲಿರುವ ನಂಬಿಕಸ್ಥ ಸಚಿವರಲ್ಲಿ ಅವರೂ ಓರ್ವರಾಗಿದ್ದಾರೆ. ಆದರೆ ಕಾಗೋಡು ತಿಮ್ಮಪ್ಪರಿಗೆ ಅವಕಾಶ ಕಲ್ಪಿಸಲು ಕಿಮ್ಮನೆಯವರನ್ನು ಸಚಿವ ಸ್ಥಾನದಿಂದ ಕೈಬಿಡುವ ನಿರ್ಧಾರವನ್ನು ಸಿಎಂ ಮಾಡಬಹುದು. ಇದು ಸಿಎಂಗೆ ಅನಿವಾರ್ಯ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News