ಶಿವಮೊಗ್ಗ: ಸರಕಾರಿ ಶಾಲೆ ಮುಖ್ಯ ಶಿಕ್ಷಕಿ ಅಮಾನತು
ಶಿವಮೊಗ್ಗ, ಜೂ.17: ಹಣ ದುರುಪಯೋಗ, ಡೊನೇಷನ್ ವಸೂಲಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಗರದ ದುರ್ಗಿಗುಡಿ ಸರಕಾರಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿರವರನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯವರು ಆದೇಶ ಹೊರಡಿಸಿರುವ ಬಗ್ಗೆ ತಿಳಿದು ಬಂದಿದೆ.
ಶಾಲೆಯಲ್ಲಿ ಪ್ರವೇಶಾತಿ ಹೊಂದುವ ಪ್ರತಿ ಮಕ್ಕಳಿಂದ ತಲಾ 800 ರೂ. ಅನಧಿಕೃತವಾಗಿ ಸಂಗ್ರಹಿಸಿದ್ದರು. ಹಾಗೆಯೇ ಶಾಲೆಗೆ ಸಂಬಂಧಿಸಿದ ಹಣಕಾಸು ದುರ್ಬಳಕೆ ಮಾಡಿಕೊಂಡ ಆರೋಪವೂ ಇವರ ಮೇಲಿತ್ತು. ಇದರ ಜೊತೆಗೆ ಶಾಲೆಯ ಆಡಳಿತ ಮಂಡಳಿಯೊಂದಿಗೆ ಸಮನ್ವಯತೆ ಹೊಂದಿರಲಿಲ್ಲ. ಶಾಲಾಭಿವೃದ್ಧಿ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದ ದೂರಿತ್ತು. ಈ ಕುರಿತಂತೆ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಮುಖ್ಯ ಶಿಕ್ಷಕಿಯ ವಿರುದ್ಧ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕೆಲ ಪೋಷಕರು ಮುಖ್ಯ ಶಿಕ್ಷಕರು ಡೊನೇಷನ್ ಹೆಸರಿನಲ್ಲಿ ಹಣ ಸಂಗ್ರಹಿಸಿ, ಯಾವುದೇ ರಶೀದಿ ನೀಡಿಲ್ಲವೆಂದು ದೂರಿದ್ದರು. ಶಾಲೆಗೆ ಸಂಬಂಧಿಸಿದ ಹಣ ದುರ್ಬಳಕೆ ಮಾಡಿಕೊಂಡಿದ್ದು ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಂದಿತ್ತು ಎನ್ನಲಾಗಿದೆ. ಈ ಸಂಬಂಧ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಹೇಳಲಾಗಿದೆ.