2,000 ನಕಲಿ ವೈದ್ಯರ ಕ್ಲಿನಿಕ್ ಮುಚ್ಚುಗಡೆ: ಸಚಿವ ಖಾದರ್
ಬೆಂಗಳೂರು, ಜೂ. 17: ನಕಲಿ ವೈದ್ಯರಿಗೆ ಕಡಿವಾಣ ಹಾಕಲು ಸರಕಾರ ಬದ್ಧವಾಗಿದ್ದು, ಈವರೆಗೂ ಎರಡು ಸಾವಿರ ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ಸುವರ್ಣ ಮಹೋತ್ಸವದ ನೆನಪಿನ ಸುವರ್ಣ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಕಲಿ ವೈದ್ಯರಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದ್ದು, ಈಗಾಗಲೇ ನಕಲಿ ವೈದ್ಯರ ಪತ್ತೆಗೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಇದುವರೆಗೂ ಎರಡು ಸಾವಿರ ನಕಲಿ ವೈದ್ಯರನ್ನು ಪತ್ತೆಹಚ್ಚಿ ಗಂಭೀರ ಪ್ರಕರಣದ ಅನ್ವಯ 230 ನಕಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಹೇಳಿದರು.
ಬಯೋಮೆಟ್ರಿಕ್ ವ್ಯವಸ್ಥೆಯಿಂದ ಗೊಂದಲ ನಿವಾರಣೆ: ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಆಯುಷ್ ಮಂಡಳಿ ಬಯೋಮೆಟ್ರಿಕ್ ಕಾರ್ಡ್ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿ ಜಾರಿಗೆ ತಂದಿದೆ. ಈ ಮೊದಲು ಕೋಲ್ಕತ್ತಾ, ದಿಲ್ಲಿ ಸೇರಿ ಇತರೆ ರಾಜ್ಯಗಳ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ ತಂದು ಇಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಅಲ್ಲದೆ, ಆ ಪ್ರಮಾಣ ಪತ್ರ ನಕಲಿಯೋ, ಅಸಲಿಯೋ ಎಂಬ ಗೊಂದಲವಿರುತ್ತಿತ್ತು. ಅದೇ ರೀತಿ, ನಮ್ಮ ರಾಜ್ಯದ ವೈದ್ಯರು ಬೇರೆ ರಾಜ್ಯಗಳಿಗೆ ಹೋದರೂ ಇಂತಹ ಜಿಜ್ಞಾಸೆ ಎದುರಾಗುತ್ತಿತ್ತು. ಆದರೆ, ಬಯೋಮೆಟ್ರಿಕ್ ವ್ಯವಸ್ಥೆ ಗೊಂದಲ ನಿವಾರಿಸಿ ವೈದ್ಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಅವರು ನುಡಿದರು
ಸ್ಥಳೀಯ ಮಟ್ಟದಲ್ಲಿ ನಕಲಿ ವೈದ್ಯರ ಪತ್ತೆಗೆ ಗ್ರಾಮ ಪಂಚಾಯತ್‌ನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಜನತೆ ಸಹಕಾರ ಅಗತ್ಯ ಎಂದ ಅವರು, ಆಯುರ್ವೇದ ಭವಿಷ್ಯದ ವೈದ್ಯ ಪದ್ಧತಿಯಾಗಿದ್ದು, ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸವೂ ಆಗಬೇಕು ಜೊತೆಗೆ ಪಾರಂಪರಿಕ ಹಾಗೂ ನಾಟಿ ವೈದ್ಯ ಪದ್ಧತಿಯನ್ನು ಒಟ್ಟಾಗಿ ಕೊಂಡೊಯ್ಯಬೇಕು. ಅದೇ ರೀತಿ, ನಾಟಿ ವೈದ್ಯರ ಬಳಿ ನಿಜವಾದ ಔಷಧಿ ಉಂಟು, ಹೀಗಾಗಿ ನಾಟಿ ವೈದ್ಯರು ಗ್ರಾಮ ಮಟ್ಟದಲ್ಲಿ ಸಣ್ಣ ಸಣ್ಣ ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಡುವ ಮೂಲಕ ನಾಟಿ ವೈದ್ಯ ಪದ್ಧತಿಯ ಪ್ರಗತಿಗೂ ಗಮನ ನೀಡಬೇಕೆಂದು ಸಚಿವ ಖಾದರ್ ಆಯುರ್ವೇದ ಮಂಡಳಿಗೆ ಸೂಚಿಸಿದರು.
ಸಮಾವೇಶ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ಈ ಆಯುರ್ವೇದ ಎಕ್ಸೃ್ಪೋವನ್ನು ನಡೆಸುತ್ತಿದ್ದು, ಬ್ರಿಕ್ಸ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು ಈ ಎಕ್ಸೃ್ಪೋದಲ್ಲಿ ಭಾಗವಹಿಸಲಿವೆ. ಈ ಅಂತಾರಾಷ್ಟ್ರೀಯ ಸಮಾವೇಶ ದೇಶದ ಆಯುರ್ವೇದವನ್ನು ಜನಪ್ರಿಯಗೊಳಿಸುವ ಜೊತೆಗೆ ವಿದೇಶಗಳ ಪಾರಂಪರಿಕ ವೈದ್ಯ ಪದ್ಧತಿಯನ್ನು ಅರಿತುಕೊಳ್ಳಲು ನೆರವಾಗಲಿದೆ. ಪ್ರಸ್ತುತ ಸಾಲಿನ ಸೆಪ್ಟ್ಟಂಬರ್ ತಿಂಗಳ ಮೊದಲನೆ ವಾರದಲ್ಲಿ ಈ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಆಯುಷ್ ಇಲಾಖೆ ನಿರ್ದೇಶಕ ಸುಭಾಷ್ ಕೆ.ಮಾಲ್ಖೆಡೆ, ನೋಂದಣಾಧಿಕಾರಿ ಪೂರ್ಣಿಮಾಭಟ್, ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಮಂಡಳಿ ಅಧ್ಯಕ್ಷ ಸತ್ಯಮೂರ್ತಿ ಭಟ್, ನಿವೃತ್ತ ಅಧಿಕಾರಿ ಶ್ರೀಕಂಠಯ್ಯ ಮತ್ತಿತರರು ಉಪಸ್ಥಿತರಿದ್ದರು.