ಖರ್ಗೆ ಮಧ್ಯಪ್ರವೇಶ; ಸಿಎಂಗೆ ಸಂಕಷ್ಟ
ಬೆಂಗಳೂರು, ಜೂ.17: ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶ ದಿಂದಾಗಿ ರಾಜ್ಯ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆಗೆ ಅನುಮೋದನೆ ನೀಡುವುದನ್ನು ಹೈ ಕಮಾಂಡ್ ಒಂದು ದಿನದ ಮಟ್ಟಿಗೆ ಮುಂದೂಡಿದೆ.
ಹೊಸದಿಲ್ಲಿಯಲ್ಲಿನ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವ ಸಂಪುಟ ಪುನಾರಚನೆಗೆ ತಾತ್ವಿಕ ಒಪ್ಪಿಗೆ ಲಭ್ಯವಾಗಿದ್ದರೂ, ಯಾರನ್ನು ಸಂಪುಟದಲ್ಲಿ ಉಳಿಸಿಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಂಬ ಗೊಂದಲಕ್ಕೆ ತೆರೆಬಿದ್ದಿಲ್ಲ.
ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜೊತೆ ಸೋನಿಯಾಗಾಂಧಿಯನ್ನು ಭೇಟಿಯಾದ ಸಿದ್ದರಾಮಯ್ಯ, ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಯಾರಿಗೆ ಅವಕಾಶ ನೀಡಬೇಕು, ಯಾರಿಗೆ ಕೈ ಬಿಡಬೇಕು ಎಂಬುದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಜೊತೆ ಸಮಾಲೋಚನೆ ನಡೆಸಿ ಒಮ್ಮತದ ನಿರ್ಣಯ ಕೈಗೊಳ್ಳುವಂತೆ ಸೋನಿಯಾ ಸೂಚಿಸಿದ್ದಾರೆ ಎನ್ನಲಾಗಿದೆ.
ರಾಜ್ಯದ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ.ಕೃಷ್ಣ, ಆಸ್ಕರ್ ಫೆರ್ನಾಂಡಿಸ್, ಎಂ.ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ದಿಗ್ವಿಜಯ್ ಸಿಂಗ್ ಹಾಗೂ ಅಹ್ಮದ್‌ಪಟೇಲ್ ಅವರೊಂದಿಗೆ ಚರ್ಚೆ ನಡೆಸಿ ಒಮ್ಮತದ ಪಟ್ಟಿಯೊಂದಿಗೆ ನಾಳೆ ಬೆಳಗ್ಗೆ ನಡೆಯಲಿರುವ ಸಭೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಮುಖ್ಯಮಂತ್ರಿಗೆ ತಿಳಿಸಿದ್ದಾರೆ.
ಸೋನಿಯಾಗಾಂಧಿ ನಿವಾಸದಲ್ಲಿ ನಡೆದ ಸಭೆಯ ಬಳಿಕ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ಮಲ್ಲಿಕಾರ್ಜುನ ಖರ್ಗೆಯನ್ನು ವಿಶ್ವಾಸಕ್ಕೆ ತೆಗೆದುಕೊ ಳ್ಳುವ ಸಂಬಂಧ ಚರ್ಚೆ ನಡೆಸಿದರು. ನಮ್ಮ ಪಟ್ಟಿಗೆ ಮಲ್ಲಿಕಾರ್ಜುನ ಖರ್ಗೆ ಅಪಸ್ವರ ಎತ್ತಿದ್ದರೆ, ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡುವುದು ಕಷ್ಟ ಎಂಬುದು ಮುಖ್ಯಮಂತ್ರಿಗೆ ಮನವರಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಖರ್ಗೆಯನ್ನು ಸಮಾಧಾನ ಪಡಿಸಲು ಪರಮೇಶ್ವರ್ ಅವರನ್ನೇ ಸಂಧಾನ ರಾಯಭಾರಿಯನ್ನಾಗಿ ಸಿದ್ದರಾಮಯ್ಯ ಕಳುಹಿಸಿ ಕೊಟ್ಟಿದ್ದಾರೆ. ಅಲ್ಲದೆ, ದಿಗ್ವಿಜಯ್‌ಸಿಂಗ್ ಕೂಡ ಖರ್ಗೆ ಜೊತೆ ಈ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಪಟ್ಟು; ಸೋನಿಯಾ ಪ್ರವಾಸ ಮುಂದೂಡಿಕೆ: ಶತಾಯಗತಾಯ ಸಚಿವ ಸಂಪುಟವನ್ನು ಈ ಅಧಿವೇಶನ ಆರಂಭಗೊಳ್ಳುವುದಕ್ಕಿಂತ ಮುಂಚಿತವಾಗಿ ಪುನಾರಚನೆ ಮಾಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿರುವುದರಿಂದ, ತಮ್ಮ ವಿದೇಶ ಪ್ರವಾಸವನ್ನು ಒಂದು ದಿನದ ಮಟ್ಟಿಗೆ ಸೋನಿಯಾಗಾಂಧಿ ಮುಂದೂಡಿದ್ದಾರೆ.
ಸಚಿವರಾದ ಕಿಮ್ಮನೆ ರತ್ನಾಕರ, ಅಭಯಚಂದ್ರಜೈನ್, ಖಮರುಲ್ ಇಸ್ಲಾಮ್, ಅಂಬರೀಷ್, ಶಾಮನೂರು ಶಿವಶಂಕರಪ್ಪ, ಉಮಾಶ್ರೀ, ದಿನೇಶ್ ಗುಂಡೂರಾವ್, ಶ್ರೀನಿವಾಸ್‌ಪ್ರಸಾದ್, ಬಾಬುರಾವ್‌ಚಿಂಚನಸೂರ್, ಪರಮೇಶ್ವರ್‌ನಾಯಕ್, ವಿನಯಕುಮಾರ್ ಸೊರಕೆಯವರನ್ನು ಸಂಪುಟದಿಂದ ಕೈ ಬಿಡಲು ಮುಖ್ಯಮಂತ್ರಿ ಉದ್ದೇಶಿಸಿದ್ದರು. ಈ ಪಟ್ಟಿಯನ್ನು ಮುಂದಿಟ್ಟುಕೊಂಡು ನಿನ್ನೆ ಚರ್ಚೆ ನಡೆಸಿದ ಸಂದರ್ಭದಲ್ಲೇ ಖರ್ಗೆ ಯಾವುದೇ ಕಾರಣಕ್ಕೂ ಖಮರುಲ್ ಇಸ್ಲಾಮ್ ಹಾಗೂ ಬಾಬುರಾವ್ ಚಿಂಚನ ಸೂರ್‌ರನ್ನು ಸಂಪುಟದಿಂದ ಕೈ ಬಿಡಬಾರದು ಎಂದು ಪಟ್ಟು ಹಿಡಿದಿದ್ದರು ಎಂದು ತಿಳಿದುಬಂದಿದೆ.
ಸೋನಿಯಾಗಾಂಧಿ ಜೊತೆ ಇಂದು ನಡೆದ ಸಭೆಯ ಬಳಿಕ ಬಾಬುರಾವ್ ಚಿಂಚನ ಸೂರ್‌ರನ್ನು ಉಳಿಸಿಕೊಂಡು ಖಮರುಲ್ ಇಸ್ಲಾಮ್‌ರನ್ನು ಕೈ ಬಿಡಲು ಮುಖ್ಯಮಂತ್ರಿ ಒಲವು ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ, ಮೈಸೂರು ಭಾಗಕ್ಕೆ ಮುಖ್ಯಮಂತ್ರಿ ಸೇರಿದಂತೆ ಹೆಚ್ಚಿನ ಸಚಿವರು ಲಭ್ಯವಾಗಿದ್ದಾರೆ. ಲೋಕೋಪಯೋಗಿ ಸಚಿವ ಮಹದೇವಪ್ಪರನ್ನು ಕೈ ಬಿಟ್ಟು ಮೋಟಮ್ಮಗೆ ಅವಕಾಶ ನೀಡುವಂತೆ ತಿರುಗೇಟು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನುಳಿದಂತೆ ಸಚಿವರಾದ ಅಂಬರೀಷ್, ವಿನಯ್‌ಕುಮಾರ್ ಸೊರಕೆ, ವಿ.ಶ್ರೀನಿವಾಸ್‌ಪ್ರಸಾದ್ ಪರವಾಗಿ ಹಲವು ಸಂಸದರು ಲಾಬಿ ನಡೆಸಿದ್ದು, ಇವರನ್ನು ಸಂಪುಟದಿಂದ ಕೈ ಬಿಡಲು ಅವಕಾಶ ನೀಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ.