ಕಾರ್ಪೊರೇಟ್ ಹಣದಿಂದ ಸರಕಾರಿ ಶಾಲಾ-ಕಾಲೇಜು ಅಭಿವೃದ್ಧಿ: ಡಿವಿ
ಬೆಂಗಳೂರು, ಜೂ.17: ಬಹುರಾಷ್ಟ್ರೀಯ ಕಂಪೆನಿಗಳ ಸಿಎಸ್‌ಆರ್(ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕ ನಿಧಿ) ಹಣವನ್ನು ಬಳಸಿಕೊಂಡು ಸರಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದೆಂದು ಕಾನೂನು ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ನಗರದ ಟೀ ದಾಸರಹಳ್ಳಿಯಲ್ಲಿ ಶಾಲಾ-ಕಾಲೇಜುಗಳ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ಉತ್ತರ ಲೋಕಸಭಾ ಕ್ಷೇತ್ರದ ಹೆಬ್ಬಾಳ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ದೊಡ್ಡಗೊಲ್ಲರಹಟ್ಟಿ, ಹುಣಸಮಾರನಹಳ್ಳಿ, ಚಿಕ್ಕಜಾಲ, ತಬರನಹಳ್ಳಿ, ದೊಡ್ಡಜಾಲ, ಸಣ್ಣಪ್ಪನಹಳ್ಳಿಯ ಸರಕಾರಿ ಶಾಲೆ, ಮಲ್ಲೇಶ್ವರಂನ ಪದವಿಪೂರ್ವ ಕಾಲೇಜು ಸೇರಿದಂತೆ ಹಲವು ಶಾಲಾ ಕಾಲೇಜುಗಳಲ್ಲಿ ಪ್ರಯೋಗಾಲಯ, ಕೊಠಡಿ ನಿರ್ಮಾಣ, ಗ್ರಂಥಾಲಯ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಸದರ ನಿಧಿ ಹಾಗೂ ವಿವಿಧ ಬಹುರಾಷ್ಟ್ರೀಯ ಕಂಪೆನಿಗಳ ಸಿಎಸ್‌ಆರ್ ಹಣವನ್ನು ಬಳಸಿಕೊಂಡು ಈ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇನ್‌ಫೋಸಿಸ್, ಐಟಿಸಿ, ಎಂಬಸಿ ಡೆವಲಪರ್ಸ್, ಜಿ.ಆರ್.ಡೆವಲಪರ್ಸ್, ಜಿಂದಾಲ್ ಕಾರ್ಖಾನೆ, ಕೆನ್ನಾ ಮೆಟಲ್ ಕಾರ್ಖಾನೆಗಳು ಶೈಕ್ಷಣಿಕ ಮೂಲಭೂತ ಅಭಿವೃದ್ಧಿಗೆ ನೆರವು ನೀಡಿವೆ ಎಂದು ಅವರು ಹೇಳಿದರು. ಇನ್‌ಫೋಸಿಸ್‌ನ ಅಧ್ಯಕ್ಷೆ ಸುಧಾಮೂರ್ತಿ, ಶಾಸಕ ಮುನಿರಾಜು, ಜಿಲ್ಲಾ ಪಂಚಾಯತ್ ಸದಸ್ಯ ಮರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.