ಡಬ್ಬಿಂಗ್ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ: ಗೃಹ ಇಲಾಖೆಗೆ ಹೈಕೋರ್ಟ್ ಸೂಚನೆ
ಧಾರವಾಡ, ಜೂ.17: ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಮಾಡಿದ ಸಿನೆಮಾ ಅಥವಾ ಧಾರಾವಾಹಿಗಳನ್ನು ರಾಜ್ಯದಲ್ಲಿ ಪ್ರದರ್ಶಿಸಲು ಅವಕಾಶ ಮಾಡಿಕೊಡುವಂತೆ ಧಾರವಾಡದ ಹೈಕೋರ್ಟ್ ಗೃಹ ಇಲಾಖೆಗೆ ಮಧ್ಯಾಂತರ ಆದೇಶ ನೀಡಿದೆ. ಈ ಸಂಬಂಧ ದರ್ಶನ್ ಎಂಟರ್ ಪ್ರೈಸಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ದರ್ಶನ್ ಎಂಟರ್‌ಫೈಸಸ್ ಸಂಸ್ಥೆ ಮೈ ಹಸ್ಬೆಂಡ್ ವೈಫ್ ಎಂಬ ಹಿಂದಿ ಸಿನೆಮಾದ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸಿ ಅದನ್ನು ನಾನು, ನನ್ನ ಪ್ರೀತಿ ಎನ್ನುವ ಶೀರ್ಷಿಕೆಯಡಿ ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ರದರ್ಶನಕ್ಕೆ ಸಿದ್ಧಗೊಳಿಸಿತ್ತು. ಇದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಪ್ರಮುಖರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಸಂಸ್ಥೆಯು ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಕಮಿಷನ್ 2015ರ ಜುಲೈ 27ರಂದು ಆದೇಶ ನೀಡಿ, ಕನ್ನಡಕ್ಕೆ ಡಬ್ಬಿಂಗ್ ಆದ ಚಲನಚಿತ್ರ ಅಥವಾ ಧಾರಾವಾಹಿಗಳ ಪ್ರದರ್ಶನವನ್ನು ತಡೆಯುವುದು ಕಾಂಪಿಟೇಶನ್ ಕಾಯ್ದೆ-2002ರ ಉಲ್ಲಂಘನೆಯಾಗುತ್ತದೆ ಎಂದಿತ್ತು. ಇಷ್ಟಾಗಿಯೂ ವಿರೋಧದ ಹೇಳಿಕೆಗಳು ಮುಂದುವರಿದಿದ್ದವು. ಈ ಹಿನ್ನೆಲೆಯಲ್ಲಿ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಚಿತ್ರ ಪ್ರದರ್ಶನಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತ್ತು. ಜೊತೆಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಅಗತ್ಯ ರಕ್ಷಣೆ ನೀಡುವಂತೆ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿತ್ತು. ವಾದ ಪ್ರತಿವಾದವನ್ನು ಆಲಿಸಿರುವ ನ್ಯಾಯಪೀಠವು ಅರ್ಜಿದಾರರು ಸಲ್ಲಿಸಿರುವ ಮನವಿ ಪತ್ರವನ್ನು ಪರಿಶೀಲಿಸಿ, ನಿಯಮಾನುಸಾರ ಡಬ್ಬಿಂಗ್ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದೆ.