×
Ad

ಎಸಿಬಿ ಬಲೆಗೆ ಬಿದ್ದ ಎಸ್ಸೈ, ಪೇದೆ

Update: 2016-06-17 23:40 IST

ಬೆಂಗಳೂರು, ಜೂ. 17: ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಟ್ಟ ಮೊದಲ ಬಾರಿಗೆ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಓರ್ವ ಸಬ್‌ಇನ್‌ಸ್ಟೆಕ್ಟರ್ ಹಾಗೂ ಪೊಲೀಸ್ ಪೇದೆಯೊಬ್ಬರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಇಲ್ಲಿನ ಜೀವನ್‌ಭೀಮಾ ನಗರ ಪೊಲೀಸ್ ಠಾಣೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅದೇ ಠಾಣೆಯ ಸಬ್ಇನ್‌ಸ್ಪೆಕ್ಟರ್ ಶ್ರೀನಿವಾಸ ಹಾಗೂ ಪೇದೆ ಪುರುಷೋತ್ತಮ್ ಎಂಬವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
 ಪ್ರಕರಣದ ಹಿನ್ನ್ನೆಲೆ: ಇಲ್ಲಿನ ಜೀವನಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು ಶಸ್ತ್ರಾಸ್ತ್ರ ತರಬೇತಿಗೆ ಶಿಫಾರಸು ಮಾಡುವ ಸಂಬಂಧ ಜೂ.7ರಂದು ಸ್ಥಳೀಯ ಪೊಲೀಸ್ ಠಾಣೆಗೆ ಗುಣನಡತೆ ಮತ್ತು ಪೂರ್ವಾಪರ ವಿಚಾರಣಾ ವರದಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಶ್ರೀನಿವಾಸ, ಬರಹಗಾರ ಮತ್ತು ಪೇದೆ ಪುರುಷೋತ್ತ್ತಮ್ ಅವರು ವರದಿ ನೀಡಲು 6 ಸಾವಿರಕ್ಕೆ ಬೇಡಿಕೆಯನ್ನಿಟ್ಟಿದ್ದರು. ಈ ಸಂಬಂಧ ಅರ್ಜಿದಾರರು ಎಸಿಬಿ ದೂರು ನೀಡಿದ ಹಿನ್ನೆಲೆಯಲ್ಲಿ ಲಂಚ ಪಡೆಯುವ ಸಂದರ್ಭದಲ್ಲಿ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.
ಈ ಸಂಬಂಧ ಆರೋಪಿಗಳಾದ ಸಬ್‌ಇನ್‌ಸ್ಟೆಕ್ಟರ್, ಪೇದೆ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News