×
Ad

ಸಂಪುಟ ಪುನಾರಚನೆ

Update: 2016-06-18 20:07 IST

ಬೆಂಗಳೂರು, ಜೂ. 18: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದ್ದು, ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ.
ಹಾಲಿ ಇರುವ ‘ಅಸಮರ್ಥ’ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಅನುಭವಿ ಹಾಗೂ ಯುವ ಶಾಸಕರು ಸೇರಿದಂತೆ ಹೊಸಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಅವಕಾಶ ಕಲ್ಪಿಸಲಾಗುತ್ತಿದೆ. ನಾಳೆ(ಜೂ.19)ಸಂಜೆ 4ಗಂಟೆಗೆ ರಾಜಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ, ರಾಜ್ಯಪಾಲ ವಜೂಭಾಯಿ ವಾಲಾ ಅವರು, ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.

ಈ ಮಧ್ಯೆ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವ ಶಾಸಕರು ಹಾಗೂ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ, ಸಂಪುಟ ಸ್ಥಾನ ಕಳೆದುಕೊಳ್ಳುತ್ತಿರುವವರಲ್ಲಿ ದುಗುಡ ಮಡುಗಟ್ಟಿದೆ. ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್, ವಸತಿ ಸಚಿವ ಅಂಬರೀಶ್ ಅವರ ಬೆಂಬಲಿಗರು ಯಾವುದೇ ಕಾರಣಕ್ಕೂ ಅವರನ್ನು ಸಂಪುಟದಿಂದ ಕೈಬಿಡಬಾರದೆಂದು ಬೀದಿ ಹೋರಾಟ ಆರಂಭಿಸಿದ್ದಾರೆ.

ಸಿಎಂಗೆ ಅಧಿಕಾರ: ಸಂಪುಟಕ್ಕೆ ಹೊಸದಾಗಿ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಪರಾಮಾಧಿಕಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೀಡಿದ್ದಾರೆ ಎಂದು ಗೊತ್ತಾಗಿದೆ.

ಹೊಸದಿಲ್ಲಿಯಲ್ಲಿ ಶನಿವಾರ ಬೆಳಗ್ಗೆ ಎಐಸಿಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪಾಲ್ಗೊಂಡಿದ್ದರು.

ಸಂಭವನೀಯ ಸಚಿವರು: ಕಾಗೋಡು ತಿಮ್ಮಪ್ಪ(ಸಾಗರ), ಕೆ.ಆರ್.ರಮೇಶ್ ಕುಮಾರ್(ಶ್ರೀನಿವಾಸಪುರ), ರುದ್ರಪ್ಪ ಲಮಾಣಿ(ಹಾವೇರಿ), ಎಂ.ಕೃಷ್ಣಪ್ಪ(ವಿಜಯನಗರ), ಸಂತೋಷ್ ಲಾಡ್ (ಕಲಘಟಗಿ), ಪ್ರಿಯಾಂಕ ಖರ್ಗೆ (ಚಿತ್ತಾಪೂರ), ತನ್ವೀರ್ ಸೇಠ್(ನರಸಿಂಹರಾಜ), ಬಸವರಾಜ ರಾಯರೆಡ್ಡಿ(ಯಲಬುರ್ಗಾ), ಪ್ರಮೋದ್ ಮಧ್ವರಾಜ್(ಉಡುಪಿ), ಈಶ್ವರ ಖಂಡ್ರೆ (ಭಾಲ್ಕಿ), ಎಸ್.ಎಸ್.ಮಲ್ಲಿಕಾರ್ಜುನ್ (ದಾವಣಗರೆ ಗ್ರಾಮಾಂತರ), ರಮೇಶ್ ಜಾರಕಿಹೊಳಿ(ಗೋಕಾಕ), ಎಂ.ಆರ್.ಸೀತಾರಾಂ (ವಿಧಾನ ಪರಿಷತ್ ಸದಸ್ಯ) ಸೇರಿದಂತೆ 13 ಹೊಸ ಸಚಿವರ ಪಟ್ಟಿಯಲ್ಲಿದ್ದು, ನೂತನವಾಗಿ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ.

ಸಚಿವರಿಗೆ ಗೇಟ್‌ಪಾಸ್:  ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ವಸತಿ ಸಚಿವ ಅಂಬರೀಶ್, ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ, ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ, ಆಹಾರ ಸಚಿವ ದಿನೇಶ್ ಗುಂಡೂರಾವ್, ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕಾ, ಕ್ರೀಡಾ ಸಚಿವ ಅಭಯ ಚಂದ್ರ ಜೈನ್, ಜವಳಿ ಸಚಿವ ಬಾಬುರಾವ್ ಚಿಂಚನಸೂರ್, ಅಬಕಾರಿ ಸಚಿವ ಮನೋಹರ್ ತಹಶೀಲ್ದಾರ್, ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ಹಾಗೂ ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಹದಿನಾಲ್ಕು ಮಂದಿ ಹಾಲಿ ಸಚಿವರನ್ನು ಕೈಬಿಡುವ ಸಾಧ್ಯತೆಗಳಿವೆ.

ಬಾಬುರಾವ್ ಚಿಂಚನಸೂರ್, ಖಮರುಲ್ ಇಸ್ಲಾಂ ಹಾಗೂ ಶ್ರೀನಿವಾಸ ಪ್ರಸಾದ್ ಅವರನ್ನು ಸಂಪುಟದಿಂದ ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರಿದ್ದರೂ ಅದಕ್ಕೆ ಮನ್ನಣೆ ಸಿಕ್ಕಿಲ್ಲ.
ಎಸ್.ಆರ್.ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಟ್ಟು, ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ನಿಯೋಜಿಸುವ ಸಾಧ್ಯತೆಗಳಿವೆ. ಅಂತೆಯೇ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹಿರಿಯ ಶಾಸಕ ಕೆ.ಬಿ.ಕೋಳಿವಾಡ ಅವರನ್ನು ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ನಿಯೋಜಿಸುವ ಚರ್ಚೆ ನಡೆದಿವೆ.

‘ಸಚಿವ ಸಂಪುಟಕ್ಕೆ ಹೊಸಬರ ಸೇರ್ಪಡೆ ಸಂಬಂಧ ಶೀಘ್ರದಲ್ಲೆ ಪಟ್ಟಿಯನ್ನು ಸಿದ್ಧಪಡಿಸಿ ರಾಜ್ಯಪಾಲರಿಗೆ ರವಾನಿಸುತ್ತೇನೆ. ಪ್ರಸಕ್ತ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಸಾಧ್ಯವಿಲ್ಲ. ಹೀಗಾಗಿ ಸಂಪುಟ ಪುನಾರಚನೆ ಮಾಡಲಾಗುವುದು. ಹೊಸಬರ ಸೇರ್ಪಡೆ ಹಾಗೂ ಹಾಲಿ ಸಚಿವರ ಕೈಬಿಡುವ ಬಗ್ಗೆ ತನಗೆ ಹೈಕಮಾಂಡ್ ಸಂಪೂರ್ಣ ಅಧಿಕಾರ ನೀಡಿದೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News