×
Ad

‘ಯುವಜನತೆ ಸದೃಢ ದೇಶ ನಿರ್ಮಾಣದಲ್ಲಿ ತೊಡಗಿಕೊಳ್ಳಿ’

Update: 2016-06-18 23:16 IST

ವೀರಾಜಪೇಟೆ, ಜೂ.18: ದೇಶದ ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗದೆ, ಉತ್ತಮ ನಡತೆ ಹಾಗೂ ಒಳ್ಳೆಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಸದೃಢ ದೇಶ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಬೋಧ ಸ್ವರೂಪಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಪಾಲಿಬೆಟ್ಟದಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಾಕೃತಿಕ ಚಿಕಿತ್ಸಾ ವಿಧಾನ ಹಾಗೂ ಸಮಗ್ರ ಆರೋಗ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರೋಗ್ಯವಂತ ಯುವ ಜನತೆಯೇ ತರುಣ ರಾಷಟ್ರೆವೆಂದು ಪರಿಗಣಿಸಲ್ಪಟ್ಟಿರುವ ಭಾರತದ ನಿಜವಾದ ಸಂಪತ್ತು. ಪ್ರಾಚೀನ ಕಾಲದಲ್ಲಿ ಜನರು ಪ್ರಾಕೃತಿಕ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಂಡು ಆರೋಗ್ಯವಂತರಾಗಿದ್ದರು. ಆದರೆ ಆಧುನಿಕ ಕಾಲದಲ್ಲಿ ಭಾರತೀಯರು ವಿದೇಶಿ ಜೀವನ ಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯಪೂರ್ಣವಾದ ಬದುಕು ನಡೆಸಲು ಹೆಣಗಾಡುತ್ತಿದ್ದಾರೆ. ಯುವ ಶಕ್ತಿಯನ್ನು ಹೊಂದಿರುವ ದೇಶದ ತರುಣರು ಉತ್ತಮ ಹವ್ಯಾಸವನ್ನು ಹಾಗೂ ಪ್ರಾಕೃತಿಕ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಂಡು ಆರೋಗ್ಯ ಪೂರ್ಣ ಬದುಕನ್ನು ನಡೆಸಿದರೆ ಮಾತ್ರ ದೇಶ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಕೃತಿಕ ಚಿಕಿತ್ಸಾ ವಿಧಾನ ಹಾಗೂ ಸಮಗ್ರ ಆರೋಗ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಡಾ. ಮುಕುಂದನ್, ಪ್ರಾಚೀನ ಕಾಲದಲ್ಲಿ ಭಾರತೀಯರು ಪ್ರಾಕೃತಿಕ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಂಡು ಆರೋಗ್ಯವಂತರಾಗಿದ್ದು, ವಿಜ್ಞ್ಞಾನ, ತತ್ವಜ್ಞಾನ, ಸಾಹಿತ್ಯ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಯೋಗಾಭ್ಯಾಸದಲ್ಲಿ ನಿತ್ಯ ತೊಡಗಿಸಿಕೊಳ್ಳುವುದರಿಂದ ದೈನಂದಿನ ಬದುಕಿನ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಿ, ಬದುಕಿನಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಎನ್ನೆಸ್ಸೆಸ್ ಘಟಕವು ಹಮ್ಮಿಕೊಂಡಿದ್ದ ಗ್ರಾಮೀಣ ಹಸಿರೀಕರಣ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಬೋಧ ಸ್ವರೂಪಾನಂದ ಸ್ವಾಮೀಜಿ ಸಸಿಯನ್ನು ನೆಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಎಂ. ಭವಾನಿ ವಹಿಸಿದ್ದರು. ಉಪನ್ಯಾಸಕ ಶಿವದಾಸ್ ಸ್ವಾಗತಿಸಿದರು. ವಿದ್ಯಾರ್ಥಿನಿ ಕೌಶಲ್ಯ ನಿರೂಪಿಸಿದರು. ಮೀರಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News