ಜಿಲ್ಲೆಯಲ್ಲಿ ಅನರ್ಹ ಪಡಿತರ ಚೀಟಿದಾರರ ಸಂಖ್ಯೆ ಹೆಚ್ಚಳ
ಮಡಿಕೇರಿ, ಜೂ.18: ಕೊಡಗು ಜಿಲ್ಲೆಯಲ್ಲಿ 91,639 ಬಿಪಿಎಲ್ ಪಡಿತರ ಚೀಟಿಗಳಿದ್ದು, 7,587 ಅಂತ್ಯೋದಯ ಪಡಿತರ ಚೀಟಿಗಳಿವೆ. ಇದು ಅಗತ್ಯಕ್ಕಿಂತ ಹೆಚ್ಚಾಗಿದ್ದು, ಸುಮಾರು ಅರ್ಧದಷ್ಟು ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಿಗೆ ಇರುವುದು ಗಮನಕ್ಕೆ ಬಂದಿರುವುದರಿಂದ ಅನರ್ಹ ಕಾರ್ಡುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಆದೇಶಿಸಿದ್ದಾರೆ.
ಈ ಪೈಕಿ ಬಹಳಷ್ಟು ಕಾರ್ಡುದಾರರು ಶ್ರೀಮಂತರಾಗಿದ್ದು, ಅನರ್ಹರು ಇರಬಹುದೆಂದು ಇಂತಹ ಶ್ರೀಮಂತರು ಮತ್ತು ಅನರ್ಹರು ಬಿಪಿಎಲ್ ಪಡಿತರ ಚೀಟಿ ಪಡೆಯುವ ಅರ್ಹತೆ ಇಲ್ಲದಿದ್ದರೂ ಇಲಾಖೆಗೆ ತಪ್ಪುಮಾಹಿತಿ ನೀಡಿ ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಗಳನ್ನು ಪಡೆದಿರಬಹುದು. ಇಂತಹ ಪಡಿತರ ಚೀಟಿಗಳನ್ನು ಈ ಕೂಡಲೇ ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅನರ್ಹರು ಈ ಹಿಂದೆ ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದು, ಇದೀಗ ಕೊನೆಯದಾಗಿ ಜೂ.30ರವರೆಗೆ ತಮ್ಮಲ್ಲಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಇಲಾಖೆಗೆ ಹಿಂದಿರುಗಿಸಲು ಕೊನೆಯ ಅವಕಾಶ ನೀಡಲಾಗಿದೆ. ಆ ನಂತರ ಅನರ್ಹ ಪಡಿತರ ಚೀಟಿಗಳನ್ನು ಹೊಂದಿರುವುದು ಪತ್ತೆಯಾದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ತಿಳಿಸಿದ್ದಾರೆ.