ಅನ್ನಭಾಗ್ಯ ಸಮಪರ್ಕ ಅನುಷ್ಠಾನಕ್ಕೆ ಅಧಿಕಾರೇತರ ಸದಸ್ಯರ ನೇಮಕ
ಮಡಿಕೇರಿ ಜೂ.18: ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳ ಸೂಕ್ತ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯನ್ನು ಸರಕಾರ ರಚಿಸಿದೆ.
ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಿದ್ದು, ರಾಜಮ್ಮ ರುದ್ರಯ್ಯ(ಶನಿವಾರಸಂತೆ), ಪುಟ್ಟಲಕ್ಷ್ಮೀ(ಇಬ್ನಿಳವಾಡಿ), ವಿ.ಪಿ.ಸುರೇಶ್ (ಮೇಕೇರಿ), ಮರ್ವಿನ್ ಲೋಬೋ(ಆರ್ಜಿ ಗ್ರಾಮ), ಬಲ್ಯಮೀದೇರಿರ ನವೀನ್ (ಹೈಸೊಡ್ಲೂರು) ಇವರನ್ನು ನಿಯೋಜಿಸಿದೆ. ಜಿಲ್ಲಾ ಜಾಗೃತಿ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು(ಅಧ್ಯಕ್ಷರು), ಜಿಪಂಅಧ್ಯಕ್ಷರು(ಉಪಾಧ್ಯಕ್ಷರು), ಜಿಲ್ಲಾಧಿಕಾರಿ(ಸದಸ್ಯರು), ಜಿಪಂ ಸಿಇಒ(ಸದಸ್ಯರು) ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜಿಲ್ಲಾ ಜಾಗೃತಿ ಸಮಿತಿ ಸಭೆಯು ನಗರದ ಆಹಾರ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ನಡೆಯಿತು. ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆ, ಮೇಲುಸ್ತುವಾರಿ ಮಾಡುವುದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಗಟು ಮಳಿಗೆ ಬಗ್ಗೆ ನಿಗಾವಹಿಸುವುದು, ಪಡಿತರ ಚೀಟಿ ಕೋರಿ ಸಲ್ಲಿಸಿರುವ ಹೊಸ ಅರ್ಜಿಗಳನ್ನು ಮತ್ತು ಅನುಮೋದಿತ/ತಿರಸ್ಕೃತ ಹಾಗೂ ಕೈಬಿಡಲಾಗಿರುವ ನಕಲಿ ಪಡಿತರ ಚೀಟಿಗಳನ್ನು ಮೇಲುಸ್ತುವಾರಿ ಮಾಡುವುದು. ಅನ್ನಭಾಗ್ಯ ಯೋಜನೆ ಬಲಪಡಿಸಲು ಹಾಗೂ ಸಮರ್ಪಕ ಅನುಷ್ಠಾನಕ್ಕೆ ಸಲಹೆಗಳನ್ನು ನೀಡುವುದು ಜಾಗೃತಿ ಸಮಿತಿಯ ಕಾರ್ಯಚಟುವಟಿಕೆಯಾಗಿದೆ. ಸಭೆಯಲ್ಲಿ ಸಮಿತಿ ಸದಸ್ಯ ವಿ.ಪಿ.ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ನ್ಯಾಯಬೆಲೆ ಅಂಗಡಿಗಳಿವೆ. ಸಂಚಾರಿ ನ್ಯಾಯಬೆಲೆ ಅಂಗಡಿಗಳೆಷ್ಟು, ಮತ್ತಿತರ ವಿಷಯಗಳಬಗ್ಗೆ ಮಾಹಿತಿ ಪಡೆದರು.
ಇದಕ್ಕೆ ಮಾಹಿತಿ ನೀಡಿದ ಆಹಾರ ಇಲಾಖೆ ಉಪನಿರ್ದೇಶಕ ಚಂದ್ರಕಾಂತ್ ನಾಯಕ್, ಜಿಲ್ಲೆಯಲ್ಲಿ ಒಟ್ಟು 290 ನ್ಯಾಯಬೆಲೆ ಅಂಗಡಿಗಳಿದ್ದು, ಎರಡು ಸಂಚಾರಿ ವಾಹನಗಳ ಮೂಲಕ 20ಕ್ಕೂ ಹೆಚ್ಚು ಕೇಂದ್ರಗಳಿಗೆ ಪಡಿತರ ವಿತರಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸುವ ಆಹಾರ ಧಾನ್ಯ ಪೋಲಾಗದಂತೆ ನೋಡಿಕೊಳ್ಳಬೇಕು. ಗೋಧಿಗಿಂತ ಅಕ್ಕಿಯನ್ನು ಹೆಚ್ಚು ವಿತರಿಸುವಂತಾಗಬೇಕು ಎಂದು ವಿ.ಪಿ.ಸುರೇಶ್ ಸಲಹೆ ನೀಡಿದರು. ಸದಸ್ಯರಾದ ರಾಜಮ್ಮ ರುದ್ರಯ್ಯ, ಪುಟ್ಟಲಕ್ಷ್ಮೀ, ಮರ್ವಿನ್ ಲೋಬೋ ಸಂಚಾರಿ ವಾಹನದ ಮೂಲಕ ವಿತರಣೆಯಾಗುವ ಪಡಿತರ ಬಗ್ಗೆ ಗ್ರಾಮಗಳಿಗೆ ಮೊದಲೇ ಮಾಹಿತಿ ನೀಡಬೇಕು ಎಂದರು.